*ಸಿದ್ದಾಪುರ, ಆ. 18: ಕೂಲಿ ಜೀವನ, ಮನೆಯಲ್ಲಿ ಕಿತ್ತು ತಿನ್ನುವ ಬಡತನ ವಿದ್ದರೂ ಓದಿ ವಿದ್ಯಾವಂತ ರಾಗಿ ಕುಟುಂಬಕ್ಕೆ ಹೆಗಲು ನೀಡಬೇಕೆಂಬ ಕನಸು, ಅಪ್ಪ - ಅಮ್ಮಂದಿರಿಗೆ ಹೊರೆಯಾಗದೆ ಸಿಕ್ಕ ಸಮಯದಲ್ಲಿ ಅಲ್ಲಿ- ಇಲ್ಲಿ ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಮುಂದುವರೆಸುತ್ತಾ ಭವಿಷ್ಯದ ಕನಸು ಕಾಣುತ್ತಿದ್ದ ಜೀವ ಕಮರಿ ಹೋಗಿದೆ. ಹೊಟ್ಟೆಪಾಡಿಗಾಗಿನ ದುಡಿಮೆಯೇ ಜೀವಕ್ಕೆ ಕುತ್ತಾಗಿ ಪರಿಣಮಿಸಿತು. ವಿಧಿಲೀಲೆಗೆ ಎಳೆಜೀವ ಬಲಿಯಾಗಿದೆ.

ಪಿ.ಕೆ. ರಾಜು ಹಾಗೂ ಸುಮತಿ ಕೂಲಿ ಕಾರ್ಮಿಕರು. ಇವರಿಗೆ ಮನು ಹಾಗೂ ವಿನು ಇಬ್ಬರು ಮಕ್ಕಳು. ಕಾನನ್‍ಕಾಡು ತೋಟದಲ್ಲಿದ್ದ ಇವರು ನಂತರ ಒಂಟಿಯಂಗಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಬಡತನದ ನಡುವೆಯೂ ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸಿದ್ದಾರೆ. ಚೆನ್ನಾಗಿ ಓದಿ, ವಿದ್ಯಾವಂತರಾಗಿ ಉನ್ನತ ಹುದ್ದೆಗೆ ಸೇರಿ ತಂದೆ - ತಾಯಿಯರ ಸಂಕಷ್ಟದಲ್ಲಿ ನೆರವಾಗ ಬೇಕೆಂಬ ಕನಸು ಮಕ್ಕಳದ್ದಾಗಿತ್ತು. ಆದರೆ ಮನೆಯಲ್ಲಿ ಬಡತನವಿದ್ದು ದರಿಂದ ತಂದೆ - ತಾಯಿಯರಿಗೆ ಕಷ್ಟ ನೀಡಬಾರದೆಂದು ಮಕ್ಕಳೇ ರಜಾ ದಿನಗಳಲ್ಲಿ, ಶಾಲೆ ಬಿಟ್ಟನಂತರದ ಬಿಡುವಿನ ವೇಳೆಯಲ್ಲಿ ಅಲ್ಲಿ- ಇಲ್ಲಿ ಕೂಲಿ ಕೆಲಸ ಮಾಡುತ್ತಾ ಅಲ್ಲಿ ಸಿಕ್ಕಿದ ಸಂಬಳದಲ್ಲಿ ಶಿಕ್ಷಣ ಪಡೆದು ಇಬ್ಬರೂ ಪದವಿ ಮುಗಿಸಿದ್ದಾರೆ.

ವಿಧಿಲೀಲೆ

ಆದರೆ, ವಿಧಿಲೀಲೆಯೇ ಬೇರೆಯಾಗಿತ್ತು. ಇತ್ತೀಚೆಗಷ್ಟೇ ನೆಲ್ಲಿಹುದಿಕೇರಿ ಬಳಿಯ ಕುಮಾರಗುಂಡಿಯಲ್ಲಿ ನೆಲೆಸಿದ್ದರು. ಇನ್ನೂ ಪೂರ್ಣವಾಗದ ಪುಟ್ಟಮನೆಯಲ್ಲಿ... ಎಂದಿನಂತೆ ಮನು ಹಾಗೂ ವಿನು ನಲ್ವತ್ತೇಕ್ರೆಯಲ್ಲಿ ಮನೆಯೊಂದರ ಕೆಲಸಕ್ಕೆ ಹೋಗಿದ್ದರು. ಬಾಗಿಲು - ಕಿಟಕಿ ಗಳಿಗೆ ಪಾಲಿಶ್ ಮಾಡುತ್ತಿದ್ದರು. ಮನೆಗೆ ಅಳವಡಿಸಲಾಗಿದ್ದ ವಿದ್ಯುತ್ ತಂತಿ ಮನೆ ಎದುರು ಹಾಕಿದ್ದ ತಗಡಿನ ಶೀಟ್ ಮೇಲೆ ಹೋಗಿತ್ತು. ಶೀಟ್ ಅಳವಡಿಸಲು ಹಾಕಿದ್ದ ಕಬ್ಬಿಣದ ಪೈಪ್‍ಗಳನ್ನು ಹಿಡಿದು ಕೊಂಡು ಸಹೋದರರು ಸೇರಿದಂತೆ ಮೂವರು ಕೆಲಸ ಮಾಡುತ್ತಿದ್ದರು. ಅದುವರೆಗೆ ಇಲ್ಲದಿದ್ದ ಕರೆಂಟ್ ಆಗತಾನೇ ಬಂದಿದೆ. ವಯರ್‍ನ ಮೇಲ್ಪದರ ಕಿತ್ತು ಹೋಗಿದ್ದರಿಂದ ವಿದ್ಯುತ್ ತಗಡಿನ ಶೀಟಿನ ಮೇಲೆ ಹರಿದು ಮೂವರಿಗೂ ಸ್ಪರ್ಶ ವಾಗಿದೆ. ಅಮಾಯಕ ವಿನು ಅಲ್ಲೇ ಅಸುನೀಗಿದ್ದಾನೆ.

ಇದೀಗ ಕುಟುಂಬದಲ್ಲಿ ಈಗ ಶೋಕ ಮಡುಗಟ್ಟಿದೆ. ಕನಸು ಕಮರಿದ ಬಗ್ಗೆ ಸಹೋದರ ಮನು ಮರುಗುತ್ತಿದ್ದಾನೆ. ಸನ್ನಡತೆ ಹೊಂದಿದ್ದ ಇಬ್ಬರ ಪೈಕಿ ಮನುವಿನ ಅಗಲಿಕೆ ಗ್ರಾಮಸ್ಥರಲ್ಲೂ ದುಃಖ ತರಿಸಿದೆ.

-ಅಂಚೆಮನೆ ಸುಧಿ.