ಮಡಿಕೇರಿ, ಜ. 9: ಗಡಿನಾಡು ಕೊಡಗಿನಲ್ಲಿ ಕನ್ನಡದ ಕಂಪನ್ನು ಪಸರಿಸುವ 11ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲೆಯ ಹೆಬ್ಬಾಗಿಲೆಂದೇ ಖ್ಯಾತಿ ಪಡೆದಿರುವ ಕುಶಾಲನಗರದಲ್ಲಿ ಇಂದು ಮತ್ತು ನಾಳೆ ನಡೆಯಲಿದೆ.ಇಂದು ಬೆಳಿಗ್ಗೆ 9 ಗಂಟೆಗೆ ಮೈಸೂರು ರಸ್ತೆ ಕಾವೇರಿ ಮಂಟಪದ ಬಳಿಯಿಂದ ಸಮ್ಮೇಳನಾಯಕ್ಷರ ಮೆರವಣಿಗೆ ನಡೆಯಲಿದ್ದು, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ಸೋಮವಾರಪೇಟೆ ಡಿವೈಎಸ್‍ಪಿ ಸಂಪತ್‍ಕುಮಾರ್, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ, ಕುಶಾಲನಗರ ವೃತ್ತ ನಿರೀಕ್ಷಕ ಖ್ಯಾತೆಗೌಡ ಉಪಸ್ಥಿತರಿರÀಲಿದ್ದಾರೆ.

ಸಮ್ಮೇಳನಾಧ್ಯಕ್ಷರ ಎಸ್.ಸಿ. ರಾಜಶೇಖರ್ ಉಪಸ್ಥಿತಿಯಲ್ಲಿ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತರಾ ಉದ್ಘಾಟಿ ಸಲಿದ್ದು, ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಪ್ರಾಸ್ತಾವಿಕ ನುಡಿ, ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಆಶಯನುಡಿ ಹಾಗೂ ನಿಕಟಪೂರ್ವ ಸಮ್ಮೇಳನಾಧ್ಯಕ್ಷರ ನುಡಿಯನ್ನು 10ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎನ್. ಮಹಾಬಲೇಶ್ವರ ಭಟ್ ಮಾಡಲಿದ್ದಾರೆ.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ್ ಲೇಖಕರ ಕೃತಿಯನ್ನು ಮತ್ತು ಸ್ಮರಣ ಸಂಚಿಕೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ಬಿಡುಗಡೆ ಮಾಡಲಿದ್ದಾರೆ.

(ಮೊದಲ ಪುಟದಿಂದ) ಮುಖ್ಯ ಅತಿಥಿಗಳಾಗಿ ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಗಣೇಶ್ ಕರ್ಣಿಕ್, ರೇಷ್ಮೆ ಮಾರುಕಟ್ಟೆ ನಿಗಮದ ಅಧ್ಯಕ್ಷ ಟಿ.ಪಿ.ರಮೇಶ್, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಹಾಗೂ ಇತರರು ಭಾಗವಹಿಸಲಿದ್ದಾರೆ.

ಬಳಿಕ ಕನ್ನಡ ಗೀತಗಾಯನ ನಡೆಯಲಿದ್ದು, ಕಲಾವಿದರು ಹಾಗೂ ಪತ್ರಕರ್ತರಾದ ಜಿ. ಚಿದ್ವಿಲಾಸ್ ಉದ್ಘಾಟಿಸಲಿದ್ದಾರೆ. ಬಳಿಕ ಕೊಡವ ನಿಘಂಟು ಬಿಡುಗಡೆ, ಮಹಿಳಾ ಗೋಷ್ಠಿ, ಮಾದ್ಯಮಗೋಷ್ಠಿ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.

ಶಾಸಕರಿಂದ ಪರಿಶೀಲನೆ

11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಧೂರಿ ಸಮಾರಂಭದ ಹಿನ್ನೆಲೆಯಲ್ಲಿ ಸಮ್ಮೇಳನದ ಗೌರವಾಧ್ಯಕ್ಷರು ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಸಭಾಂಗಣ ದಲ್ಲಿ ಪೂರ್ವಸಿದ್ದತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಸಭಾಂಗಣ ವ್ಯವಸ್ಥೆ, ಊಟದ ವ್ಯವಸ್ಥೆ, ವಸ್ತು ಪ್ರದರ್ಶನ ಮಳಿಗೆಗಳು ಹಾಗೂ ಸ್ವಚ್ಛತಾ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಿಸಿದ ಸಮಿತಿ ಸದಸ್ಯರುಗಳಿಗೆ ಸೂಚನೆಗಳನ್ನು ನೀಡಿದರು.

ಸಭಾಂಗಣದಲ್ಲಿ 3 ಸಾವಿರ ಜನರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಮಧ್ಯಾಹ್ನ 5 ಸಾವಿರ ಮಂದಿಗೆ ಭೋಜನ ವ್ಯವಸ್ಥೆ, ಸಂಜೆ ಊಟ ಎಲ್ಲಾ ತಯಾರಿಗಳ ಬಗ್ಗೆ ಚರ್ಚೆ ನಡೆಸಿದರು. 30 ಕ್ಕೂ ಅಧಿಕ ಬಾಣಸಿಗರು, ಅಡುಗೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಜನರಿಗೆ ಆತಿಥ್ಯ ನೀಡುವ ನಿಟ್ಟಿನಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಒದಗಿಸುವಂತೆ ಸೂಚನೆ ನೀಡಿದರು.

ಸಮ್ಮೇಳನದ ಯಶಸ್ಸಿಗೆ ಪ್ರತಿಯೊಬ್ಬರೂ ಪಾಲ್ಗೊಂಡು ಸಹಕರಿಸುವಂತೆ ಕೋರಿದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಏನೇ ಸಮಸ್ಯೆಗಳು ಕಂಡುಬಂದರೂ ಮುಂದಿನ ಸಭೆಗಳಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿದರು. ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ತಂಡದ ಸದಸ್ಯರುಗಳು ಹಾಗೂ ಕಾರ್ಯಕರ್ತರುಗಳಿಗೆ ಬೆಳಿಗ್ಗೆ 8.30 ಕ್ಕೆ ಕೊಪ್ಪ ಕಾವೇರಿ ಪ್ರತಿಮೆ ಬಳಿ ತಿಂಡಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

ಈ ಸಂದರ್ಭ ಹಣಕಾಸು ಸಮಿತಿಯ ಪ್ರಮುಖರಾದ ಎಸ್.ಎನ್.ನರಸಿಂಹಮೂರ್ತಿ, ವಿ.ಪಿ.ಶಶಿಧರ್, ಎಂ.ಎನ್. ಕುಮಾರಪ್ಪ, ಎಂ.ವಿ.ನಾರಾಯಣ್, ಎಸ್.ಎ.ಮುರಳೀಧರ್, ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಎಂ.ಎಂ. ಚರಣ್, ಹೆಚ್.ವಿ.ಶಿವಪ್ಪ ಮತ್ತಿತರ ಸಮಿತಿ ಪ್ರಮುಖರು ಇದ್ದರು.

ಮೆರವಣಿಗೆಗೆ ತಯಾರಿ

ಕುಶಾಲನಗರದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್‍ನ 11ನೇ ಜಿಲ್ಲಾ ಸಮ್ಮೇಳನದ ಅದ್ಧೂರಿ ಮೆರವಣಿಗೆ ಪೂರ್ವಸಿದ್ಧತೆ ನಡೆದಿದೆ ಎಂದು ಮೆರವಣಿಗೆ ಸಮಿತಿಯ ಅಧ್ಯಕ್ಷ ಫಿಲಿಪ್‍ವಾಸ್ ತಿಳಿಸಿದ್ದಾರೆ. ಕುಶಾಲನಗರದ ಕಾವೇರಿ ನದಿ ಸೇತುವೆ ಕಾವೇರಿ ಮಾತೆ ಪ್ರತಿಮೆ ಬಳಿಯಿಂದ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯೊಂದಿಗೆ ಹಲವು ಸ್ತಬ್ಧ ಚಿತ್ರಗಳು ಹಾಗೂ ಸಾಂಸ್ಕøತಿಕ ಕಲಾ ತಂಡಗಳು ಭಾಗವಹಿಸಲಿವೆ.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಡೊಳ್ಳು ಕುಣಿತ, ಗಾರುಡಿ ಗೊಂಬೆ ಮತ್ತು ಪೂಜಾ ಕುಣಿತ, ಕೊಡ್ಲಿಪೇಟೆ ಕ.ಸಾ.ಪ ವತಿಯಿಂದ ನಂದಿ ಧ್ವಜ, ಸುಂಟಿಕೊಪ್ಪ ಪ.ಪೂ. ಕಾಲೇಜಿನಿಂದ ದಫ್ ಕುಣಿತ, ಕರ್ನಾಟಕ ಕಾವಲು ಪಡೆ ವತಿಯಿಂದ ಕೋಲಾಟ, ಕುಶಾಲನಗರ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಕಂಸಾಳೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ ವೀರಗಾಸೆ, ಸುಂಟಿಕೊಪ್ಪ ತಲೆಹೊರೆ ಸಂಘ, ಕುಶಾಲನಗರ ಆಟೋ ಚಾಲಕರ ಸಂಘ, ಒಕ್ಕಲಿಗರ ಯುವ ವೇದಿಕೆ, ಬಾರವಿ ಸಹೋದರರು, ವಿಶ್ವಕರ್ಮ ಸಮಾಜ, ಪ.ಪಂ ಕುಶಾಲನಗರ ಇವರ ವತಿಯಿಂದ ಸ್ತಬ್ಧ ಚಿತ್ರ, ಚರಣ್ ಮತ್ತು ತಂಡದವರಿಂದ ನಾಸಿಕ್ ಬ್ಯಾಂಡ್, ಸವಿತಾ ಸಮಾಜದ ಮಂಗಳವಾದ್ಯ, ಕೇರಳ ಸಮಾಜದ ಚಂಡೆಮೇಳ, ಫಾತಿಮಾ ಮತ್ತು ಜ್ಞಾನ ಗಂಗಾ ವಸತಿ ಶಾಲೆಯಿಂದ ಸ್ಕೂಲ್ ಬ್ಯಾಂಡ್, ಶ್ರೀ ಧರ್ಮಸ್ಥಳ ಸೇವಾ ಯೋಜನೆ ಹಾಗೂ ವಿವಿಧ ಸಂಘಗಳಿಂದ ಕಳಸ ಹೊತ್ತ ಮಹಿಳೆಯರು, ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ ತಂಡಗಳು, ಸರಕಾರಿ ಪ್ರೌಢಶಾಲೆ ಕುಶಾಲನಗರ ವತಿಯಿಂದ ಪೊಲೀಸ್ ವಿದ್ಯಾರ್ಥಿ ಕೆಡೆಟ್, ಅರಣ್ಯ ವನಪಾಲಕ ತರಬೇತಿ ತಂಡ ಹಾಗೂ ಗೌಡ ಸಮಾಜ ಮತ್ತು ಕೊಡವ ಸಮಾಜದವರು ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಟ್ಟಣ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ ಎಂದು ಫಿಲಿಪ್‍ವಾಸ್ ಮಾಹಿತಿ ನೀಡಿದರು.

ಸಮ್ಮೇಳನದ ಹಿನ್ನೆಲೆಯಲ್ಲಿ ಕುಶಾಲನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ದ್ವಾರಗಳನ್ನು ರಚಿಸಲಾಗಿದ್ದು, ಮಡಿಕೇರಿ ರಸ್ತೆಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ದ್ವಾರ, ಸೋಮವಾರಪೇಟೆ ರಸ್ತೆಯಲ್ಲಿ ಡಿ.ಟಿ.ಚಿಕ್ಕಣ್ಣ ದ್ವಾರ, ಮೈಸೂರು ರಸ್ತೆಯಲ್ಲಿ ಗುಡ್ಡೆಮನೆ ಅಪ್ಪಯ್ಯ ದ್ವಾರ, ಸಭಾಂಗಣ ಕಟ್ಟಡದ ಹೊರಭಾಗದಲ್ಲಿ ತ್ರಿಭಾಷಾ ಕವಿ ವಿ.ಎಸ್.ರಾಮಕೃಷ್ಣ ದ್ವಾರ ಹಾಗೂ ವರದರಾಜಶ್ರೇಷ್ಠಿ ದ್ವಾರಗಳನ್ನು ನಿರ್ಮಿಸಲಾಗಿದೆ. ವೇದಿಕೆಗಳಿಗೆ ಆರ್.ಗುಂಡೂರಾವ್ ಸಭಾಂಗಣ ಹಾಗೂ ಎದುರ್ಕಳ ಶಂಕರನಾರಾಯಣ ಭಟ್ ವೇದಿಕೆ ಎಂದು ನಾಮಕರಣ ಮಾಡಲಾಗಿದೆ.