ಕುಶಾಲನಗರ, ಜ. 11: ಕನ್ನಡ ಭಾಷೆ ಯಾವದೇ ಸಂದರ್ಭ ಇತರ ಭಾಷೆಗಳ ಮೇಲೆ ಅಧಿಪತ್ಯ ಸಾಧಿಸುವಂತಹ ಕಾರ್ಯ ಮಾಡಿಲ್ಲ ಎಂದು ಹಿರಿಯ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದರು. ಅವರು ಕೊಡಗು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಷೆ ಮತ್ತು ಬದುಕು ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೃಷಿ ಚಟುವಟಿಕೆಗಳು ಕೇವಲ ಮಾರಾಟಕ್ಕೆ ಸೀಮಿತವಾಗಿರಬಾರದು. ಭೂಮಿ, ಭಾಷೆಗಳು ಮಾರಾಟವಾದಲ್ಲಿ ಆತಂಕದ ದಿನಗಳು ಎದುರಾಗಲಿವೆ. ನಿಸರ್ಗದೊಂದಿಗೆ ಸಂಧಾನ ಆಗಬೇಕಾಗಿದೆ. ಭಾಷೆ ಮತ್ತು ಬದುಕು ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದ ಅವರು, ಈ ಮೂಲಕ ದೇಶದಲ್ಲಿ ಸ್ಥಿರವಾದ ಬದುಕು ಸಾಗಿಸಲು ಸಾಧ್ಯ ಎಂದರು.

ಪ್ರಗತಿಪರ ಕೃಷಿಕರಾದ ಪ್ರೇಮ್‍ಕುಮಾರ್ ಕೃಷಿಕರಲ್ಲಿ ಜಾನಪದ ಸಾಹಿತ್ಯ ವಿಷಯದ ಬಗ್ಗೆ ಮಾತನಾಡಿ, ಬದಲೀ ಕೃಷಿಗೆ ಹೋಗಿ ರೈತರು ಕೈಸುಟ್ಟುಕೊಳ್ಳಬಾರದು. ಆಳುಗಳನ್ನು ನಂಬಿ ಕೃಷಿ ಬದುಕು ಅಸಾಧ್ಯ ಎಂದ ಅವರು, ಮಕ್ಕಳನ್ನು ಪೋಷಕರು ದಿನಕ್ಕೆ ಒಂದು ಬಾರಿಯಾದರೂ ಹೊಲದತ್ತ ಮುಖ ಮಾಡುವಂತೆ ಮಾಡಿ ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಸೃಷ್ಠಿಸಬೇಕಾಗಿದೆ ಎಂದರು.

ಉಪನ್ಯಾಸಕರಾದ ಜಯ ಕುಮಾರ್ ಆಧುನಿಕ ಮತ್ತು ಸಾಂಪ್ರದಾಯಿಕ ಕೃಷಿಯಲ್ಲಿ ಬದುಕು ಎಂಬ ವಿಷಯದ ಬಗ್ಗೆ ಮಾತನಾಡಿ, ಪ್ರಸ್ತುತ ನಾವು ತಿನ್ನುವ ಅನ್ನದಲ್ಲಿ ವಿಷದ ಅಂಶ ಸೇರ್ಪಡೆಯಾಗುತ್ತಿದ್ದು ಮಾತೃ ಬಲ ಕ್ಷೀಣವಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆಧುನಿಕ ಭರಾಟೆಯ ನಡುವೆ ಕೃಷಿ ಕ್ರಿಮಿನಾಶಕಗಳ ಮೂಲಕ ಭೂಮಿಗೆ ಹಾನಿಯಾಗುತ್ತಿದೆ. ಸೂಕ್ಷ್ಮಾಣು ಜೀವಿಗಳು ತಳಮಟ್ಟಕ್ಕೆ ಹೋಗುವ ಮೂಲಕ ಭೂಮಿ ಬರಡಾಗುತ್ತಿದ್ದು ಸಾವಯವ ಕೃಷಿ ಬಗ್ಗೆ ಪರಿಚಯವಾಗಬೇಕು ಎಂದು ತಿಳಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಎಸ್.ಸಿ.ರಾಜಶೇಖರ್, ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಉದ್ಯಮಿ ವೇದಕುಮಾರ್, ಕೃಷಿಕರಾದ ಎನ್.ಸಿ.ಬಾಬು ರಾಜೇಂದ್ರಪ್ರಸಾದ್, ಸಮಾಜ ಸೇವಕರಾದ ಜಿ.ಎಂ.ಕಾಂತರಾಜ್ ಇದ್ದರು.

ಕಾರ್ಯಕ್ರಮವನ್ನು ಪಟ್ಟಣ ಪಂಚಾಯ್ತಿ ಸದಸ್ಯರಾದ ಎಂ.ನಂಜುಂಡಸ್ವಾಮಿ ನಿರೂಪಿಸಿ, ನಿವೃತ್ತ ಶಿಕ್ಷಕರಾದ ಸೋಮಪ್ಪ ಸ್ವಾಗತಿಸಿದರು, ದಾಮೋದರ್ ವಂದಿಸಿದರು.