ನಾಪೆÇೀಕ್ಲು, ಡಿ. 22: ಗ್ರಾಮೀಣ ಪ್ರದೇಶದಲ್ಲಿ ಕನ್ನಡದ ಬೆಳವಣಿಗೆಗೆ ಆಸಕ್ತರು ಸಹಕರಿಸಬೆಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್ ಮನವಿ ಮಾಡಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ, ಭಾಷಾ ಬೆಳವಣಿಗೆಗೆ ಶಿಕ್ಷಕರು, ಸಾಹಿತ್ಯಾಸಕ್ತರು ಪ್ರೋತ್ಸಾಹ ನೀಡಬೇಕು. ಹೆಚ್ಚು ಹೆಚ್ಚು ಮಂದಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ರಾಗುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು ಎಂದರು.
ಜನವರಿ ತಿಂಗಳ 10 ಮತ್ತು 11ರಂದು ಕುಶಾಲನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ವ್ಯಾಪಾರ ವಹಿವಾಟಿನಲ್ಲಿ ಮುಂದುವರೆದಿರುವ ಪಟ್ಟಣದಲ್ಲಿ ಅಂಗಡಿ ಮಾಲಿಕರು ಕನ್ನಡ ನಾಮಫಲಕಗಳನ್ನು ಅಳವಡಿಸಿ ಭಾಷಾ ಜಾಗೃತಿ ಮೂಡಿಸಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ನಾಪೆÇೀಕ್ಲು ಹೋಬಳಿಯ ಜಿಲ್ಲಾ ಸಲಹೆಗಾರ ನೆರವಂಡ ಉಮೇಶ್ ಮಾತನಾಡಿ, ಮನುಷ್ಯ ಮನುಷ್ಯರ ನಡುವೆ ಸಂಬಂಧ ಹದಗೆಡುತ್ತಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಮತ್ತು ಮಕ್ಕಳ ಮನಸ್ಸು ಒಡೆಯದಂತೆ ನೋಡಿಕೊಳ್ಳಬೇಕು. ಸಾಮಜಿಕವಾಗಿ ಎಲ್ಲಾ ಜನಾಂಗದವರು ಒಂದೇ ಎಂಬ ಭಾವನೆಯ ವಾತಾವರಣ ನಿರ್ಮಾಣ ಮಾಡಬೇಕು ಎಂದರು. ಶಿಕ್ಷಕರಾದ ಮಹಾಂತೇಶ ಕೋಠಿ, ಸಿ.ಎಸ್.ಸುರೇಶ್, ಎನ್.ಕೆ.ಪ್ರಭು, ಸುಬ್ಬಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕ ತೆರೆಯುವ ಬಗ್ಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬೊಳ್ಳಮ್ಮ ನಾಣಯ್ಯ ಉಪಸ್ಥಿತರಿದ್ದರು. ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್ ಅಂಗಡಿ ಮಾಲೀಕರಿಗೆ ಕನ್ನಡ ನಾಮಫಲಕಗಳನ್ನು ವಿತರಿಸಿದರು.