ಸೋಮವಾರಪೇಟೆ,ಡಿ.19: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿರುವ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸೋಮವಾರ ಪೇಟೆಯ ಹಿರಿಯ ಸಾಹಿತಿ, ಕಸಾಪ ಮಾಜೀ ಜಿಲ್ಲಾಧ್ಯಕ್ಷ ಎಸ್.ಸಿ. ರಾಜಶೇಖರ್ ಅಯ್ಕೆಯಾಗಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾಹಿತಿ ನೀಡಿದರು.ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 10 ಮತ್ತು 11ರಂದು ಕುಶಾಲನಗರದ ರೈತ ಸಮುದಾಯ ಭವನದಲ್ಲಿ ನಡೆಯಲಿರುವ ಪ್ರಸಕ್ತ ಆಡಳಿತ ಮಂಡಳಿಯ ಮೊದಲನೇ ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್‍ನ 11ನೇ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವ ಸಿದ್ಧತೆಗಳು ನಡೆಯುತ್ತಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ರಾಜಶೇಖರ್ ಅವರನ್ನು ಆಯ್ಕೆಗೊಳಿಸಲಾಗಿದೆ ಎಂದರು.
ರಾಜಶೇಖರ್ ಅವರು ಇದುವರೆಗೂ 11 ಕೃತಿಗಳನ್ನು ರಚಿಸಿದ್ದು, 9 ಕವನ ಸಂಕಲನಗಳು, 1 ಕಥಾ ಸಂಕಲನ, 1 ಸ್ಮರಣ ಸಂಚಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ 5 ದಶಕದ ಹಿಂದೆ ಎಂ.ಎ. ಪದವಿ ಪಡೆದಿರುವ ಜಿಲ್ಲೆಯ ಹಿರಿಯ ಸಾಹಿತಿಗಳಾಗಿದ್ದು, 1967ರಲ್ಲಿ ಪ್ರಥಮ ಕೃತಿ ‘ಹಕ್ಕಿ ಹಾಡುತ್ತಿದೆ’ ಬಿಡುಗಡೆ ಮಾಡಿದ್ದಾರೆ. 1973ರಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್‍ನ ಸದಸ್ಯತ್ವ ಪಡೆದಿದ್ದು, ಕನ್ನಡ ಸಂಘ ಹಾಗೂ ಕರ್ನಾಟಕ ಸಂಘಗಳನ್ನು ಹುಟ್ಟು ಹಾಕುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ಸಲ್ಲಿಸುತ್ತಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಮ್ಮೇಳನ ಯಶಸ್ವಿಗೊಳಿಸಲು ಈಗಾಗಲೇ ಕಾರ್ಯಕ್ರಮ ರೂಪಿಸುತ್ತಿದ್ದು, ಪೂರ್ವ ಭಾವಿ ಸಭೆಗಳನ್ನು ನಡೆಸಲಾಗುತ್ತಿದೆ. ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ನಡೆಯುತ್ತಿರುವ ಸಮ್ಮೇಳನದ ಅಧ್ಯಕ್ಷರಾಗಿ ಇದೇ ತಾಲೂಕಿನವರು ಆಯ್ಕೆಯಾಗಿದ್ದಾರೆ. ಸಮ್ಮೇಳನವನ್ನು ಅತ್ಯಂತ ಯಶಸ್ವಿಗೊಳಿಸಲು ಎಲ್ಲಾ ಸಂಘ -ಸಂಸ್ಥೆಗಳು ಹಾಗೂ ಕನ್ನಡ ಸಾಹಿತ್ಯ, ಭಾಷಾಭಿಮಾನಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಖಜಾಂಚಿ ಎಸ್.ಎ. ಮುರಳೀಧರ್, ಮಾಧ್ಯಮ ಕಾರ್ಯದರ್ಶಿ ಅಶ್ವಥ್, ತಾಲೂಕು ಘಟಕದ ಅಧ್ಯಕ್ಷ ಜವರಪ್ಪ, ನಿರ್ದೇಶಕರುಗಳಾದ ಕವನ್ ಕಾರ್ಯಪ್ಪ, ನಾಗರಾಜ ಶೆಟ್ಟಿ, ಪ್ರಸನ್ನ ಅವರುಗಳು ಉಪಸ್ಥಿತರಿದ್ದರು.