ಶನಿವಾರಸಂತೆ, ನ. 30: ಕನ್ನಡ ನಾಡು-ನುಡಿಯ ಕುರಿತು ಹಲವು ಗಂಭೀರ ಸಮಸ್ಯೆಗಳನ್ನು ಓದುಗರ ಮುಂದಿಡುವ ಕನ್ನಡ ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಲೇಖಕಿ ಶ.ಗ. ನಯನತಾರಾ ಪ್ರಕಾಶ್ಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಪದ ಕೊಡ್ಲಿಪೇಟೆಯ ಹಲಸಿನಮರ ಗೌರಮ್ಮ-ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಸಾಪ ಕೊಡ್ಲಿಪೇಟೆ ಹೋಬಳಿ ಘಟಕದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಾಕಾರರಾಗಿ ಪಾಲ್ಗೊಂಡು ಮಾತನಾಡಿದರು.
ಗಿಡವಾಗಿದ್ದಾಗ ಬಗ್ಗದ್ದು ಮರವಾದಾಗ ಬಗ್ಗೀತೆ? ಎಂಬ ಗಾದೆ ಮಾತು ಅಕ್ಷರಶಃ ಸತ್ಯ. ಪುಟ್ಟ ಮಕ್ಕಳಾಗಿರುವಾಗಲೇ ಕನ್ನಡದ ಬಗ್ಗೆ ಅಭಿಮಾನ ಮೂಡಿಸಬೇಕು, ಕಲಿಸಬೇಕು, ತಾಯಿಯ ಪಾತ್ರ ಇಲ್ಲಿ ಮುಖ್ಯವಾಗಿದ್ದು, ಆಡಂಬರದ ಪ್ರೀತಿ ತೋರುವ ಮಮ್ಮಿಯಾಗದೇ, ಅಕ್ಕರೆಯ, ಪ್ರೀತಿಯ ಅಮ್ಮನಾಗಬೇಕು. ಕನ್ನಡ ನುಡಿಯನ್ನು ಉಳಿಸಿ-ಬೆಳೆಸುವದು ತಾಯಿಯಿಂದ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ತಾಲೂಕು ಘಟಕದ ಅಧ್ಯಕ್ಷ ಹೆಚ್.ಜೆ. ಜವರ ಮಾತನಾಡಿ, ವಿಶಾಲ ಕರ್ನಾಟಕ ನಿರ್ಮಾಣಕ್ಕಾಗಿ ತನು, ಮನಗಳಿಂದ ಹೋರಾಡಿದ ಹಿರಿಯ ಸಾಹಿತಿಗಳ, ರಾಜಕಾರಣಿಗಳ ಸ್ಮರಣೆ ರಾಜ್ಯೋತ್ಸವ ಆಚರಣೆ ಸಂದರ್ಭ ಅತ್ಯಗತ್ಯವಾಗಿದೆ ಎಂದರು.
ಕಸಾಪ ಜಿಲ್ಲಾ ಘಟಕದ ನಿರ್ದೇಶಕ ನಂಜುಂಡಸ್ವಾಮಿ, ಹೋಬಳಿ ಘಟಕದ ಕಾರ್ಯದರ್ಶಿ ಬೆಸೂರು ಸಾಂತೇಶ್, ಮಾಧ್ಯಮ ಪ್ರತಿನಿಧಿ ಅಶ್ವಥ್ ಕುಮಾರ್, ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ಸಿ.ಎಂ. ಪುಟ್ಟಸ್ವಾಮಿ, ಕರವೇ ಹೋಬಳಿ ಘಟಕದ ಅಧ್ಯಕ್ಷ ಡಿ.ಪಿ. ಭೂಪಾಲ್ ಮಾತನಾಡಿದರು.
ಕಸಾಪ ಕೊಡ್ಲಿಪೇಟೆ ಹೋಬಳಿ ಘಟಕದ ಅಧ್ಯಕ್ಷ ಎಂ.ಎಸ್. ಅಬ್ದುಲ್ ರಬ್ ಮಾತನಾಡಿ, ಕನ್ನಡಪರ ಕಾರ್ಯಕ್ರಮಗಳು ಎಲ್ಲಿಯೇ ನಡೆದರೂ ಸಹಕಾರ ನೀಡಿ ಅಭಿಮಾನ ವ್ಯಕ್ತಪಡಿಸಬೇಕು. ವಿಶಾಲ ಮನೋಭಾವದಿಂದ ಪಾಲ್ಗೊಂಡು ಕನ್ನಡತನ ಜಾಗೃತಗೊಳಿಸಬೇಕು ಎಂದರು. ಕಸಾಪ ಹೋಬಳಿ ಘಟಕದ ನಿರ್ದೇಶಕರಾದ ಲಾವಣ್ಯ, ಕವಿತಾ, ಹನೀಫ್, ಫಯಾಜ್, ಹಿರಿಯ ಶಿಕ್ಷಕ ಷಡಕ್ಷರಿ, ಉಪನ್ಯಾಸಕ ಸತೀಶ್, ಬಿ.ಕೆ. ಯತೀಶ್ ಕುಮಾರ್, ಶಾಂತಮಲ್ಲಪ್ಪ, ಸಂಪನ್ಮೂಲ ವ್ಯಕ್ತಿಗಳು, ಉಪನ್ಯಾಸಕರು ಮತ್ತಿತರರು ಉಪಸ್ಥಿತರಿದ್ದರು.