ವೀರಾಜಪೇಟೆ, ಜು. 29: ಆಂಗ್ಲ ಭಾಷೆಯ ವ್ಯಾಮೋಹ ಬಿಟ್ಟು, ಅದನ್ನು ಪ್ರತಿಷ್ಠೆ ಎಂದು ಭಾವಿಸದೆ, ನಮ್ಮ ಭಾಷೆಯನ್ನು ಪ್ರೀತಿಸಿ ಪೋಷಿಸಿದರೆ ಸಾರ್ಥಕತೆಯನ್ನು ಕಾಣಬಹುದು, ಭಾಷೆಯನ್ನು ಉಳಿಸ ಬಹುದು ಎಂದು ವೀರಾಜಪೇಟೆಯ ಡಿ.ವೈ.ಎಸ್.ಪಿ ನಾಗಪ್ಪ ಹೇಳಿದರು.
ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ವೀರಾಜಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಕನ್ನಡ ಜಾಗೃತಿ ಅಭಿಯಾನಕ್ಕೆ ಚಾಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ವೀರಾಜಪೇಟೆ ತಾಲೂಕಿನಾದ್ಯಂತ ನಡೆಯುವ ಈ ಕನ್ನಡ ಜಾಗೃತಿ ಕಾರ್ಯಕ್ರಮ ಉತ್ತಮವಾಗಿದ್ದು ಈ ಮೂಲಕ ಕನ್ನಡವನ್ನು ಮನೆ ಮನೆಗೆ ತಲಪಿಸುವ ಕೆಲಸ ಆಗಬೇಕು. ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಲಿ. ನಮ್ಮ ಮಾತೃ ಭಾಷೆಯನ್ನು ಗೌರವಿಸುವದು ಎಲ್ಲರ ಕರ್ತವ್ಯವಾಗಬೇಕು ಎಂದು ನಾಗಪ್ಪ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಕನ್ನಡ ಜಾಗೃತಿ ಅಭಿಯಾನಕ್ಕೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಇಂದಿನಿಂದ ವೀರಾಜಪೇಟೆ ತಾಲೂಕಿನಲ್ಲಿ ಕನ್ನಡ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸರಕಾರದ ನಿಯಮ ದಂತೆ ವರ್ತಕರು ಕನ್ನಡ ನಾಮಫಲಕ ವನ್ನು ಅಳವಡಿಸಬೇಕು. ಯಾರೆ ಆಗಲಿ ನಾಡಿನ ಋಣ ತೀರಿಸಲು ಭಾಷಭಿಮಾನ ಬೆಳೆಸಿಕೊಂಡು ಸಹಕಾರ ನೀಡಬೇಕು ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಶ್ರೀಧರ್ ನೆಲ್ಲಿತ್ತಾಯ ಸಭೆಯನ್ನು ಉದ್ದೇಶಿಸಿ ಮಾತನಾಡಿ, ನೆÀರೆಯಲ್ಲಿ ಕೇರಳ ರಾಜ್ಯವಿರುವದರಿಂದ ಸಹಜವಾಗಿ ವೀರಾಜಪೇಟೆ ತಾಲೂಕಿನಲ್ಲಿ ಬೇರೆ ಭಾಷೆಯ ಪ್ರಭಾವವಿದೆ. ಆದರೆ ಅವರು ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ಕೈಜೋಡಿಸಬೇಕು. ಜನರು ಸದಾ ಕನ್ನಡದ ಸೇವೆಯಲ್ಲಿ ತೊಡಗಿಕೊಳ್ಳದೆ ಹೋದರು, ಕೆಲವು ಸಮಯವನ್ನು ಇದಕ್ಕಾಗಿ ಮೀಸಲಿಡಬೇಕು. ಕೇರಳದಲ್ಲಿ ಮಲೆಯಾಳಂ ಬಿಟ್ಟು ಯಾವ ಭಾಷೆಯ ನಾಮಫಲಕ ಕಾಣಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕನ್ನಡವನ್ನು ಸಣ್ಣದಾಗಿ ಬರೆದು ಆಂಗ್ಲ ಭಾಷೆಯನ್ನು ದೊಡ್ಡದಾಗಿ ಬರೆಯುತ್ತಾರೆ. ಇನ್ನಾದರು ಕನ್ನಡದಲ್ಲಿ ನಾಮಫಲಕ ದೊಡ್ಡದಾಗಿ ಬರೆಯದೆ ಹೋದರೆ ಜಿಲ್ಲಾಧಿಕಾರಿ ಆದೇಶದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ವೀರಾಜಪೇಟೆ ಕನ್ನಡದ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿನಾಡು ವೀ.ಪೇ. ಯಲ್ಲಿ ಕನ್ನಡ ಅವಸಾನಕ್ಕೆ ಸಾಗಿದೆ. ಕೊಡಗು ಕರ್ನಾಟಕ ರಾಜ್ಯದ ಕಾಶ್ಮೀರÀ ಎನ್ನುತ್ತಾರೆ, ಆದರೆ ಕೊಡಗು ಇಂದು ಅನ್ಯ ಭಾಷೆಯ ನಡುವೆ ತನ್ನ ಅಸ್ತಿತ್ವ ಕಳೆದುಕೊಳ್ಳುವಂತಾಗಿದೆ. ಇಂದು ನಾಮಫಲಕದಲ್ಲಿ ಆಂಗ್ಲ ಭಾಷೆ ಹೋಗಿ, ಮಲೆಯಾಳಂ ಭಾಷೆ ರಾರಾಜಿಸುತ್ತಿದೆ. ಆದ್ದರಿಂದ ಜಿಲ್ಲಾದ್ಯಂತ ಕನ್ನಡ ಜಾಗೃತಿ ಅಭಿಯಾನ ಆರಂಭಿಸಲಾಗಿದ್ದು, ಇದೀಗ ವೀರಾಜಪೇಟೆ ತಾಲೂಕಿನ ಲ್ಲಿಯೂ ಚಾಲನೆ ನೀಡಲಾಗಿದೆ. ವರ್ತಕರು ನಾಮ ಫಲಕವನ್ನು ಕನ್ನಡದಲ್ಲಿ ಬರೆಯಬೇಕು ಎಂದು ಹೇಳಿದರು.
ಸಭೆಯಲ್ಲಿ ಪ.ಪಂ. ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ವೀ.ಪೇ. ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾದಪಂಡ ಕಾಶಿ ಕಾವೇರಪ್ಪ, ವೀರಾಜಪೇಟೆ ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ ಮುಲ್ಲೇಂಗಡ ಅಶೋಕ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪರಿಷತ್ ಸದಸ್ಯೆ ರೇಖಾ ಶ್ರೀಧರ್, ವೀ.ಪೇ. ನಗರ ಠಾಣಾಧಿಕಾರಿ ಸುಬ್ರಮಣಿ, ಪಟ್ಟಣ ಪಂಚಾಯಿತಿ ಸದಸ್ಯ ಶಂಕರ ಶೆಟ್ಟಿ ಹಾಗೂ ಸವಿತಾ ಉಪಸ್ಥಿತರಿದ್ದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನÀ ಸದಸ್ಯ ದಿವಾಕರ್ ಸ್ವಾಗತಿಸಿದರು, ಕಾರ್ಯದರ್ಶಿ ಚಮ್ಮಟ್ಟೀರ ಪ್ರವೀಣ್ ನಿರೂಪಿಸಿ ವಂದಿಸಿದರು.