ಮಡಿಕೇರಿ, ನ. 15: ಕನಿಷ್ಟ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಹಾಗೂ ಸರಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘ ನಗರದಲ್ಲಿ ಪ್ರತಿಭಟನೆ ನಡೆಸಿತು.

ಮಡಿಕೇರಿ ತಾಲೂಕು ಪಂಚಾಯಿತಿ ಕಚೇರಿ ಎದುರು ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಗ್ರಾ.ಪಂ. ನೌಕರರು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮ ಪಂಚಾಯ್ತಿ ನೌಕರರಿಗೆ 2016 ಆ.4 ರಿಂದಲೇ ಸರಕಾರ ಕನಿಷ್ಟ ವೇತನವನ್ನು ನಿಗದಿ ಮಾಡಿ ಆದೇಶ ಹೊರಡಿಸಿದ್ದರೂ, ಕೊಡಗಿನ ಒಟ್ಟು 104 ಗ್ರಾಮ ಪಂಚಾಯಿತಿಗಳಲ್ಲಿ ಅರ್ಧದಷ್ಟು ಗ್ರಾ.ಪಂ.ಗಳು ಸರ್ಕಾರದ ನಿಯಮವನ್ನು ಪಾಲಿಸುತ್ತಿಲ್ಲವೆಂದು ಆರೋಪಿಸಿದರು.

ಕೆಲವು ಗ್ರಾ.ಪಂ.ಗಳಲ್ಲಿ ನೌಕರರಿಗೆ ಸಂಬಳವಾಗದೆ ಏಳು ತಿಂಗಳುಗಳೇ ಕಳೆದಿದೆ. ಕಮಿಷನ್ ಆಸೆಗಾಗಿ ಜನಪ್ರತಿನಿಧಿಗಳು ಕೇವಲ ಕಾಮಗಾರಿಗಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆಯೇ ಹೊರತು ಗ್ರಾ.ಪಂ ನೌಕರರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲವೆಂದು ಭರತ್ ಆರೋಪಿಸಿದರು. ಅನೇಕ ವರ್ಷಗಳಿಂದ ದುಡಿಯುತ್ತಿರುವ ನೌಕರರಿಗೆ ನೇರ ನೇಮಕಾತಿಯಿಂದ ಅನ್ಯಾಯವಾಗುತ್ತಿದ್ದು, ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸಿದರು.

ಬೇಡಿಕೆಗಳು: ಸರಕಾರದ ಆದೇಶದಂತೆ ಕರ ವಸೂಲಿಗಾರ, ಕಂಪ್ಯೂಟರ್ ಆಪರೇಟರ್, ಕ್ಲರ್ಕ್‍ಗಳಿಗೆ ರೂ. 12,122 ಕನಿಷ್ಟ ವೇತನ, ರೂ. 398 ತುಟ್ಟಿ ಭತ್ಯೆ, ಪಂಪ್ ಆಪರೇಟರ್, ಎಲೆಕ್ಟ್ರೀಷಿಯನ್‍ಗೆ ರೂ. 10,588 ಕನಿಷ್ಟ ವೇತನ, ರೂ. 398 ತುಟ್ಟಿ ಭತ್ಯೆ, ಜವಾನರಿಗೆ ರೂ. 10,010 ಕನಿಷ್ಟ ವೇತನ, ರೂ. 398 ತುಟ್ಟಿ ಭತ್ಯೆ, ಸ್ವೀಪರ್‍ಗಳಿಗೆ ರೂ. 12,870, ಪ್ರತಿ ತಿಂಗಳು 5ನೇ ತಾರೀಕಿನೊಳಗೆ ವೇತನ ನೀಡಬೇಕು, ಪಂಪ್ ಆಪರೇಟರ್‍ಗಳಿಂದ ಕರ ವಸೂಲಿಗಾರರ ಹುದ್ದೆಗೆ ಬಡ್ತಿ ನೀಡಬೇಕು, ವೇತನಕ್ಕೆ ಅಗತ್ಯವಿರುವ ಅನುದಾನವನ್ನು ಸರಕಾರವೇ ಭರಿಸಬೇಕು, ನೌಕರರ ಭವಿಷ್ಯ ನಿಧಿ ಜಾರಿ ಮಾಡಬೇಕು, ನಿವೃತ್ತಿಯಾಗುವ ನೌಕರರಿಗೆ ಗ್ರಾಚ್ಯುಟಿ ಜಾರಿ ಮಾಡಬೇಕು, ಬಡ್ತಿಯ ಪ್ರಮಾಣವನ್ನು ಶೇ. 30 ರಿಂದ 100ಕ್ಕೆ ಏರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಪ್ರತಿಭಟನಾಕಾರರು ತಾ.ಪಂ. ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್ ಅವರಿಗೆ ನೀಡಿದರು.