ನಾಪೋಕ್ಲು, ನ. 27: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು ಮತ್ತು ಪಾರಾಣೆ ಗ್ರಾಮಗಳ ನಡುವಿನ ಸಂಪರ್ಕಕ್ಕೆಂದು ನಿರ್ಮಿಸಿರುವ ಮಕ್ಕಿಕಡು ಸೇತುವೆ ಕಾಮಗಾರಿ ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಗ್ರಾಮಸ್ಥರ ಕನಸು ಕನಸಾಗಿಯೇ ಉಳಿದಿದೆ. ಗ್ರಾಮಗಳ ನಡುವಿನ ಸಂಪರ್ಕದ ನಿರೀಕ್ಷೆಯಲ್ಲಿರುವ ಗ್ರಾಮೀಣ ಮಂದಿ ಸ್ಥಗಿತಗೊಂಡ ಯೋಜನೆಯಿಂದ ಚಿಂತಿತರಾಗಿದ್ದಾರೆ. ಇಲ್ಲಿನ ಬೇತು ಗ್ರಾಮ ಹಾಗೂ ಬಲಮುರಿ ಗ್ರಾಮಗಳ ನಡುವೆ ಕಕ್ಕಬೆ ಹೊಳೆ ಹರಿಯುತ್ತಿದ್ದು ಎರಡು ಗ್ರಾಮಗಳ ನಡುವಿನ ಸಂಪರ್ಕಕ್ಕೆ ಅಡ್ಡಿಯಾಗಿತ್ತು. ನಾಪೋಕ್ಲುವಿನಿಂದ ಪಾರಾಣೆ ಗ್ರಾಮಕ್ಕೆ ತೆರಳಲು ಜನತೆ ಸುತ್ತು ಬಳಸಿ ಸಾಗುತ್ತಿದ್ದರು. ಹೊಳೆ ಸೇತುವೆ ನಿರ್ಮಿಸಿದರೆ ಸಂಪರ್ಕ ಸುಲಭ ಎಂದು ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. ಮಾಜಿ ಸಂಸದೆ ಹೇಮಮಾಲಿನಿ ಅವರ ಅನುದಾನದ ರೂ. 40 ಲಕ್ಷ ವೆಚ್ಚದ ಯೋಜನೆಯಡಿ ಸೇತುವೆ ನಿರ್ಮಾಣವೇನೋ ಆರಂಭಗೊಂಡಿತು. ರೂ. 20 ಲಕ್ಷ ಹಣ ಮಂಜೂರಾಗಿದ್ದು, ಭಾಗಶಃ ಕೆಲಸ ಪೂರ್ಣಗೊಂಡಿದ್ದು ಇದೀಗ ಕಾಮಗಾರಿ ಸ್ಥಗಿತಗೊಂಡಿದೆ. ಇನ್ನುಳಿದ ಹಣ ಮಂಜೂರಾಗದಿರುವದೇ ಇದಕ್ಕೆ ಕಾರಣ ಎನ್ನಲಾಗಿದೆ. ನಾಪೋಕ್ಲುವಿನ ಪ್ರಸಿದ್ಧ ಮಕ್ಕಿ ಶಾಸ್ತಾವು ದೇವಾಲಯದ ಬಳಿಯಿಂದ ಹಾದುಹೋಗುವ ರಸ್ತೆಯಿದು. ರಸ್ತೆ, ಸೇತುವೆ ಇಲ್ಲದೇ ಜನರು ಸಮಸ್ಯೆ ಎದುರಿಸುತ್ತಿದ್ದು ಸೇತುವೆ ನಿರ್ಮಾಣಗೊಂಡಲ್ಲಿ ನಾಪೋಕ್ಲುವಿಗೆ ಬರಲು ದೂರ ಕಡಿಮೆಯಾಗಲಿದೆ. ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ಅನುಕೂಲ ನಿರೀಕ್ಷೆ ಇಟ್ಟುಕೊಂಡಿದ್ದ ಗ್ರಾಮಸ್ಥರ ಕನಸು ಕನಸಾಗಿಯೇ ಉಳಿದಿದ್ದು ಜನಪ್ರತಿನಿಧಿಗಳು ಶೀಘ್ರ ಇತ್ತ ಗಮನಹರಿಸಿ ಸೇತುವೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.