ಸೋಮವಾರಪೇಟೆ, ಸೆ. 7: ತಾಲೂಕಿನ ಕೊಡ್ಲಿಪೇಟೆ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಕಣಾರಳ್ಳಿ ಗ್ರಾಮದಲ್ಲಿ ಉಳ್ಳವರು ಒತ್ತುವರಿ ಮಾಡಿಕೊಂಡಿರುವ ಪೈಸಾರಿ ಜಾಗ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಕಂದಾಯ ಇಲಾಖಾಧಿಕಾರಿಗಳಿಗೆ ಸೂಚಿಸಿದರು.ಕೊಡ್ಲಿಪೇಟೆಯ ನಾಡಕಚೇರಿಯಲ್ಲಿ ಆಯೋಜಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿಗಳಿಗೆ, ಪೈಸಾರಿ ಜಾಗ ಒತ್ತುವರಿಯಾಗಿರುವ ಬಗ್ಗೆ ಪ್ರಸಾದ್ ಎಂಬವರು ಮಾಹಿತಿ ನೀಡಿದ ಮೇರೆ, ಜಿಲ್ಲಾಧಿಕಾರಿಗಳು ಒತ್ತುವರಿ ತೆರವಿಗೆ ಸೂಚಿಸಿದರು. ಕಣಾರಳ್ಳಿ ಗ್ರಾಮದಲ್ಲಿ ಏಕರೆಗಟ್ಟಲೆ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಕೆಲವರು ತೋಟ ನಿರ್ಮಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ಇಂತಹ ಪ್ರಕರಣಗಳನ್ನು ಪತ್ತೆಹಚ್ಚಿ ತಕ್ಷಣ ಒತ್ತುವರಿ ತೆರವುಗೊಳಿಸಿ, ವಸತಿ ರಹಿತ ಬಡವರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಯಿತು. ಕೆಲವೊಂದು ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳ ಲಾಯಿತು. ಅಪರ ಜಿಲ್ಲಾಧಿಕಾರಿ ಸತೀಶ್ಕುಮಾರ್, ತಹಸೀಲ್ದಾರ್ ಕೃಷ್ಣ ಅವರುಗಳು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ಸದಸ್ಯ ಪುಟ್ಟರಾಜು, ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಬೆಸೂರು ಮತ್ತು ಬ್ಯಾಡಗೊಟ್ಟ ಗ್ರಾ.ಪಂ. ಅಧ್ಯಕ್ಷರುಗಳು, ಬ್ಯಾಡಗೊಟ್ಟ ಗ್ರಾ.ಪಂ. ಉಪಾಧ್ಯಕ್ಷ ಅಹಮ್ಮದ್, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕ್ಯಾತೆ ಶಿವು, ವೇದಕುಮಾರ್, ಬೆಂಬಳೂರು ದಿನೇಶ್ ಸೇರಿದಂತೆ, ಸಂಘ ಸಂಸ್ಥೆಗಳ ಮುಖಂಡರು, ಇತರ ಪ್ರಮುಖರು ಉಪಸ್ಥಿತರಿದ್ದರು.