ಸೋಮವಾರಪೇಟೆ, ಸೆ.28: ತಾಲೂಕಿನ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಾರಳ್ಳಿ ಗ್ರಾಮದಲ್ಲಿರುವ ಪೈಸಾರಿ ಜಾಗದಲ್ಲಿ ಕೆಲವರು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದು, ತಕ್ಷಣ ಇದನ್ನು ತೆರವುಗೊಳಿಸಲು ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ಮುಂದಾಗಬೇಕು ಎಂದು ಬ್ಯಾಡಗೊಟ್ಟ ಗ್ರಾ.ಪಂ. ಸದಸ್ಯರುಗಳು ಆಗ್ರಹಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸದಸ್ಯ ಬಿ.ಕೆ. ದಿನೇಶ್, ಕಣಾರಳ್ಳಿ ಗ್ರಾಮದ ಸ.ನಂ.33/1ರ 4 ಎಕರೆ ಪ್ರದೇಶದಲ್ಲಿ ಇತ್ತೀಚಿನ ಕೆಲ ದಿನಗಳಿಂದ ಅಕ್ರಮವಾಗಿ ಕೆಲವರು ಗುಡಿಸಲುಗಳನ್ನು ನಿರ್ಮಿಸಿ ಕೊಳ್ಳುತ್ತಿದ್ದಾರೆ. ಇದುವರೆಗೂ 50ಕ್ಕೂ ಅಧಿಕ ಮಂದಿ ಅಕ್ರಮವಾಗಿ ಪೈಸಾರಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ. ಈ ಬಗ್ಗೆ ಕೊಡ್ಲಿಪೇಟೆಯ ಕಂದಾಯ ಇಲಾಖೆಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಪೈಸಾರಿ ಜಾಗ ಒತ್ತುವರಿ ತೆರವಿಗೆ ಸೂಚನೆ ನಿಡಿದ್ದರೂ ಜಿಲ್ಲಾಧಿಕಾರಿಗಳ ಆದೇಶಕ್ಕೆ ಕಂದಾಯ ಇಲಾಖಾಧಿಕಾರಿಗಳು ಕವಡೆಕಾಸಿನ ಕಿಮ್ಮತ್ತೂ ನೀಡಿಲ್ಲ ಎಂದು ಆರೋಪಿಸಿದರು.
ಬೆಂಬಳೂರು ವಾರ್ಡ್ನ ಗ್ರಾಮಸ್ಥರು ಈಗಾಗಲೇ ಗ್ರಾಮ ಪಂಚಾಯಿತಿಗೆ ಈ ಬಗ್ಗೆ ದೂರು ನೀಡಿದ್ದು, ಪಂಚಾಯಿತಿಯಿಂದಲೂ ಯಾವದೇ ಕ್ರಮ ಕೈಗೊಂಡಿಲ್ಲ. ಈ ಭಾಗದ ಸದಸ್ಯರಾದ ನಮ್ಮ ಗಮನಕ್ಕೆ ತಾರದೇ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಈ ಬಗ್ಗೆ ಸ್ಥಳೀಯರ ಮನವಿಯನ್ನು ಪುರಸ್ಕರಿಸಿ ತಕ್ಷಣ ಅನಧಿಕೃತ ಗುಡಿಸಲುಗಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಇದೀಗ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿರುವ ಪ್ರದೇಶ ಕೋಮು ಸೂಕ್ಷ್ಮ ಪ್ರದೇಶವೂ ಆಗಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಯಾವದೇ ಗಲಭೆಗಳು ನಡೆದರೂ ಸಹ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆಯೇ ನೇರ ಹೊಣೆಯಾಗ ಬೇಕಾಗುತ್ತದೆ ಎಂದು ಗ್ರಾ. ಪಂ. ಸದಸ್ಯರುಗಳು ಎಚ್ಚರಿಸಿದರು.
ಇದೇ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕ್ಯಾತೆ ಮತ್ತು ಹಾರೋಹಳ್ಳಿ ಗ್ರಾಮದಲ್ಲಿ ತಲಾ 4 ಎಕರೆಯಂತೆ ಒಟ್ಟು 8 ಎಕರೆ ಪೈಸಾರಿ ಜಾಗವಿದ್ದು, ಕಂದಾಯ ಇಲಾಖೆ ಈಗಾಗಲೇ ಗ್ರಾಮ ಪಂಚಾಯಿತಿ ಸುಪರ್ದಿಗೆ ಈ ಸ್ಥಳವನ್ನು ವರ್ಗಾಯಿಸಿದೆ. ಪಾರದರ್ಶಕವಾಗಿ, ನ್ಯಾಯಯುತವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ನಿವೇಶನ ರಹಿತರಿಗೆ ಗ್ರಾಮ ಪಂಚಾಯಿತಿ ವತಿಯಿಂದಲೇ ಜಾಗ ನೀಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಂಚಾಯಿತಿ ಸದಸ್ಯರುಗಳಾದ ಹೇಮಾವತಿ, ರೇಣುಕಾ ಮೇದಪ್ಪ, ಸಾವಿತ್ರಿ ಕುಮಾರ್ ಅವರುಗಳು ಉಪಸ್ಥಿತರಿದ್ದರು.