ಮಡಿಕೇರಿ, ಜ. 3: ಹೊಸ ವರ್ಷ ಸಂಭ್ರಮಾಚರಣೆಗೆಂದು ಅರಣ್ಯಕ್ಕೆ ನುಗ್ಗಿ ಎರಡು ಕಡವೆಗಳನ್ನು ಬೇಟೆಯಾಡಿದವರನ್ನು ಅರಣ್ಯ ಇಲಾಖಾಧಿಕಾರಿಗಳು ಸೆರೆ ಹಿಡಿದಿದ್ದು, ಈ ಪೈಕಿ ಜಿಲ್ಲೆಯ ಕೊಡ್ಲಿಪೇಟೆಯ ವ್ಯಕ್ತಿಯೋರ್ವ ಕೂಡ ಬಂಧಿತನಾಗಿದ್ದಾನೆ.ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಕೆಮ್ಮಣ್ಣುಗುಂಡಿ ಮತ್ತು ರಾಜ್‍ಮಹಲ್ ಮಾರ್ಗದ ನೆತ್ತಿ ಚೌಕ ಎಂಬಲ್ಲಿ ಕಳೆದ ಶನಿವಾರ ರಾತ್ರಿ ಹನ್ನೊಂದು ಮಂದಿ ಸೇರಿ ಎರಡು ಕಡವೆಗಳನ್ನು ಬೇಟೆಯಾಗಿದ್ದಾರೆ. ನಂತರ ಮರುದಿನ ನಸುಕಿನ ವೇಳೆ ವಾಹನದಲ್ಲಿ ಕಡವೆ ಮಾಂಸವನ್ನು ಹೊತ್ತೊಯ್ಯುತ್ತಿದ್ದ ಸಂದರ್ಭ ಕೆಮ್ಮಣ್ಣುಗುಂಡಿ ಅರಣ್ಯ ತನಿಖಾ ಠಾಣೆ ಬಳಿ ವನ್ಯಜೀವಿ ವಿಭಾಗದ ಅಧಿಕಾರಿಗಳು ಪತ್ತೆ ಹಚ್ಚಿ ಹನ್ನೊಂದು ಮಂದಿಯನ್ನು ಬಂಧಿಸಿ, ಎರಡು ವಾಹನಗಳು, ಬಂದೂಕು, ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರ ಪೈಕಿ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯ ಬೆಳೆಗಾರ ಮಹಮ್ಮದ್ ರಿಜ್ವಾನ್ (36) ಸೇರಿದಂತೆ ಬೆಂಗಳೂರಿನ ಇನ್ಫೋಸಿಸ್ ಇಂಜಿನಿಯರ್ ಮೀರ್ ನಾಯಕ್ ಅಲಿ, ಗ್ಲೋಬಲ್ ಸಲ್ಯೂಷನ್‍ನ ಇಂಜಿನಿಯರ್ ಸೈಯ್ಯದ್ ಅಮೀರ್, ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೀರ್ ಜಮೀರ್ ಅಲಿ, ಸಕಲೇಶಪುರದ ಅಕ್ತರ್ ಅಹ್ಮದ್, ಕರ್ನಾಟಕ ರೈಫಲ್ ಅಸೋಸಿಯೇಶ್‍ನನ ಮಹಮ್ಮದ್ ಸಮೀರ್, ಮುಜಾಫಿರ್, ಚಿಕ್ಕಮಗಳೂರು ಅತ್ತಿಗುಂಡಿ ಮಹಲ್ ಗ್ರಾಮದ ಅರುಣ್, ಪ್ರಸನ್ನ, ಹರೀಶ್, ಚೇತನ್ ಅವರುಗಳು ಬಂಧಿತರಾಗಿದ್ದಾರೆ.
ಮತ್ತೋರ್ವ ಆರೋಪಿ ರಿಯಲ್ ಎಸ್ಟೇಟ್ ಉದ್ಯಮಿ ರಫೀಕ್ ತಲೆಮರೆಸಿಕೊಂಡಿದ್ದಾನೆ ಎಂದು ತರಿಕೆರೆ ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ಹೊಸ ವರ್ಷ ಆಚರಣೆಗಾಗಿ ಆರೋಪಿಗಳು ಈ ಕೃತ್ಯ ಎಸಗಿರುವದಾಗಿ ತಿಳಿದು ಬಂದಿದೆ.