*ಗೋಣಿಕೊಪ್ಪಲು, ಜ. 31 : ಮೂರನೇ ಬ್ಲಾಕ್‍ನ ವಾಣಿಜ್ಯ ಕಟ್ಟಡ ಕೆಡವುದರ ಬಗ್ಗೆ ಪಂಚಾಯ್ತಿಯಲ್ಲಿ ಮತ್ತೆ ಕಾಂಗ್ರೆಸ್, ಬಿ.ಜೆ.ಪಿ ನಡುವೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದೆ.ಪಂಚಾಯಿತಿ ಆಡಳಿತಕ್ಕೆ ಬಂದ ನಂತರ ಸದಾ ಜಗಳದಲ್ಲೇ ಕಾಲಹರಣ ಮಾಡುತ್ತಿದ್ದ ಸದಸ್ಯರು ಕಳೆದ 2 ತಿಂಗಳಿನಿಂದ 2 ಪಕ್ಷಗಳ ನಡುವೆ ಅವಿನಾಭಾವ ಸಂಬಂಧÀವಿತ್ತು.ಕೆಲವು ಅಭಿವೃದ್ದಿ ಕಾರ್ಯಗಳಿಗೆ ಕೈಜೋಡಿಸಿ ಕಾಮಗಾರಿಗಳಿಗೂ ಚಾಲನೆ ನೀಡಿದರು. ಆದರೆ ಇದೀಗ 3ನೇ ಬ್ಲಾಕ್‍ನಲ್ಲಿರುವ ವಾಣಿಜ್ಯ ಕಟ್ಟಡ ಕೆಡವುವ ಬಗ್ಗೆ ರಾಜಕೀಯ ದೊಂಬರಾಟಕ್ಕೆ ವೇದಿಕೆಯಾಗಿದೆ.

ಡಿ.26ರ ಸಾಮಾನ್ಯ ಸಭೆಯಲ್ಲಿ 3ನೇ ವಾರ್ಡ್‍ನಲ್ಲಿರುವ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಿಸುವ ಬಗ್ಗೆ ನಿರ್ಣಯಕ್ಕೆ ಅನುಮೋದನೆ ದೊರೆತಿತ್ತು.

ಸರಕಾರದಿಂದ ಕಟ್ಟಡ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ

(ಮೊದಲ ಪುಟದಿಂದ) ಬಿಡುಗಡೆಗೊಂಡು ಟೆಂಡರ್ ಪ್ರಕ್ರಿಯೆಯೂ ನಡೆದಿದೆ. ಈ ಪ್ರಕಾರ ಕಟ್ಟಡವನ್ನು ನೆಲಸಮಗೊಳಿಸಿ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಬೇಕಾಗಿತ್ತು. ಮಾರ್ಚ್ ತಿಂಗಳ ಒಳಗೆ 20 ಲಕ್ಷ ಅನುದಾನ ಬಳಕೆಯಾಗದಿದ್ದರೆ ಸರಕಾರದ ಖಾತೆಗೆ ಹಣ ಹಿಂದಿರುಗುವ ಪ್ರಮೇಯ ಎದುರಾಗುವದರಿಂದ ತರಾತುರಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಮುಂದಾಗಬೇಕಾಗಿತ್ತು. ಆದರೆ ಸಭೆ ನಡೆದು ತಿಂಗಳು ಕಳೆದರೂ ಶಿಥಿಲಾವಸ್ಥೆಯ ಕಟ್ಟಡವನ್ನು ನೆಲಸಮಗೊಳಿಸುವ ಕ್ರಮಕ್ಕೆ ಮುಂದಾಗಿರಲಿಲ್ಲ. ಪಂಚಾಯಿತಿ ಸದಸ್ಯರ ನಿರ್ಲಕ್ಷ್ಯ ಇದಕ್ಕೆ ಸಾಕ್ಷಿಯಾಗಿತ್ತು.

ಮಂಗಳವಾರ 3ನೇ ವಾರ್ಡಿನ ಸದಸ್ಯ ಮುರುಗ ತರಾತುರಿಯಲ್ಲಿ ಕಟ್ಟಡ ಕೆಡವಲು ಏಕ ನಿರ್ಧಾರ ಕೈಗೊಂಡು ಸರ್ವಾಧಿಕಾರ ಮೆರೆದದ್ದು, ಬಿ.ಜೆ.ಪಿ ಬೆಂಬಲಿತ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಅಧ್ಯಕ್ಷೆ ಸೆಲ್ವಿ ಅವರಿಗೂ ಮಾಹಿತಿ ನೀಡದೆ ಕಟ್ಟಡ ಕೆಡವಲು ಮುಂದಾಗಿದ್ದು, ಕಾನೂನು ಬಾಹಿರ. ಈ ಬಗ್ಗೆ ಈ.ಒ ಅವರಲ್ಲಿ ದೂರು ಸಲ್ಲಿಸುವದಾಗಿ ಪಿ.ಡಿ.ಒ ತಿಳಿಸಿದ್ದಾರೆ.

ಕಟ್ಟಡ ಕೆಡವಲು ಪಂಚಾಯತ್ ಕಾಯ್ದೆ ಪ್ರಕಾರ ಕೆಲವು ನಿಯಮಗಳಿವೆ. ಸರ್ವಾಧಿಕಾರ ಧೋರಣೆ ಸಲ್ಲ. ಏಕಾಏಕಿ ಪಂಚಾಯಿತಿಗೆ ಮಾಹಿತಿ ನೀಡದೆ ಸ್ವನಿರ್ಧಾರ ಕೈಗೊಂಡು ಅಧ್ಯಕ್ಷರನ್ನು ಹಾಗೂ ಪಿ.ಡಿ.ಒ ಅವರನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ. ಈ ಕ್ರಮ ಖಂಡನೀಯ ಎಂದು ಸದಸ್ಯೆ ರತಿ ಅಚ್ಚಪ್ಪ, ಸುರೇಶ್ ರೈ ಆರೋಪಿಸಿದ್ದಾರೆ.

ಅಭಿವೃದ್ಧಿಯ ದೃಷ್ಟಿಯಿಂದ ಮುರುಗ ಅವರ ಕ್ರಮ ಸ್ವಾಗತಾರ್ಹ. ಮಾರ್ಚ್ ತಿಂಗಳೊಳಗೆ ಅನುದಾನ ಬಳಕೆಯಾಗದಿದ್ದರೆ ಹಣ ಸರಕಾರಕ್ಕೆ ಹಿಂದಿರುಗುತ್ತದೆ. 20 ಲಕ್ಷ ಅನುದಾನ ಸದ್ಬಳಕೆಯಾಗಬೇಕಾದರೆ ಮುರುಗ ಅವರ ನಿಲುವು ಉತ್ತಮ ಬೆಳವಣಿಗೆಯಾಗಿದೆ. ಪಂಚಾಯತ್‍ಗೆ ಸಂಬಂಧಪಟ್ಟ ಕಟ್ಟಡದಲ್ಲಿದ್ದ ವಸ್ತುಗಳನ್ನು ಸುರಕ್ಷಿತವಾಗಿ ಇಡಲಾಗಿದೆ. ಕಟ್ಟಡ ಕಾಮಗಾರಿ ನಡೆಯುವದಷ್ಟೆ ನಮ್ಮ ಗುರಿ. ರಾಜಕೀಯದ ಮೇಲು ಕೀಳಿನಾಟ ಅಭಿವೃದ್ಧಿಗೆ ತೊಡಕು ಎಂಬದು ಬಿ.ಜೆ.ಪಿ ಸದಸ್ಯರಿಗೆ ಮನವರಿಕೆಯಾಗಬೇಕಿದೆ ಎಂದು ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಮಂಜುಳ, ಮುರುಗ, ಜೆ. ಸೋಮಣ್ಣ ಹೇಳಿದ್ದಾರೆ.

ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗೆ ರಾಜಕೀಯ ಬೆರೆತರೆ ಪಟ್ಟಣ ಅಭಿವೃದ್ದಿ ಹೊಂದುವದು ಅಸಾಧ್ಯ. ‘ನಾನು, ನೀನು’ ಎಂಬ ರಾಜಕೀಯ ಹಗ್ಗಜಗ್ಗಾಟ ಅಭಿವೃದ್ಧಿ ಕಾರ್ಯಕ್ಕೆ ತೊಡಕಾಗಿದೆ. ಸರಕಾರದ ಅನುದಾನವನ್ನು ಬಳಸಿ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸುವ ಪ್ರಯತ್ನಕ್ಕೆ ಸದಸ್ಯರು ಮುಂದಾಗಬೇಕು ಎಂಬದು ಸಾರ್ವಜನಿಕರ ಒತ್ತಾಯ.

-ಚಿತ್ರ ವರದಿ: ಎನ್.ಎನ್. ದಿನೇಶ್