ಮಡಿಕೇರಿ, ಜ. 6: ಸರಕಾರದ ಕೆಲಸ ದೇವರ ಕೆಲಸ..., ಇದು ಒಂದು ರೀತಿಯಲ್ಲಿ ನಾಣ್ನುಡಿಯಂತೆ ಮುಂದುವರಿದುಕೊಂಡು ಬರುತ್ತಿದೆ. ಇದು ಒತ್ತಟ್ಟಿಗಿರಲಿ. ಸರಕಾರದ ಕೆಲಸ ಒತ್ತಡದ ಕೆಲಸವೂ ಹೌದು. ಸರಕಾರಿ ನೌಕರರೆಂದರೆ ಅವರು ಇದೇ ರೀತಿಯಲ್ಲಿರಬೇಕು. ಇಂತಹ ಕಟ್ಟುಪಾಡು ಇರಬೇಕು. ನಿಯಮ ಪಾಲನೆಯೊಂದಿಗೆ ಸಾರ್ವಜನಿಕರಿಗೆ ಸದಾಕಾಲ ಲಭ್ಯರಾಗಬೇಕೆಂದು ಎಲ್ಲರೂ ಬಯಸುತ್ತಾರೆ. ಇದು ಸಹಜವೂ ಕೂಡ..., ಆದರೆ ಸಾರ್ವಜನಿಕರ ಪರವಾಗಿ ತಮ್ಮ ತಮ್ಮ ಮನೆಯ ಜಂಜಾಟ, ಸಂಸಾರ ತಾಪತ್ರೆ, ಕಷ್ಟ-ಸುಖಗಳಿಗೆ ಸ್ಪಂದಿಸಲು ಪರಸ್ಪರ ಸಾಧ್ಯವಾಗದ ಒತ್ತಡದ ನಡುವೆ ಕೆಲಸ ನಿರ್ವಹಿಸುವ ಸರಕಾರಿ ನೌಕರರಿಗೂ ಒಂದು ರೀತಿಯಲ್ಲಿ ‘ರಿಲ್ಯಾಕ್ಸ್‍ಡ್ ಮೂಡ್’ ಬೇಕಲ್ಲವೇ...ಕೊಡಗಿನಲ್ಲಿ ಕ್ರೀಡೆ ಎಂದರೆ ಅಚ್ಚುಮೆಚ್ಚು. ಅದರಲ್ಲೂ ಕೆಲವಾರು ವರ್ಷಗಳಿಂದ ಕೊಡವ ಕೌಟುಂಬಿಕ ಹಾಕಿ ಉತ್ಸವ ಯಶಸ್ವಿಯಾದ ಬಳಿಕ ಜನಾಂಗೀಯವಾಗಿ ವಿವಿಧ ಕ್ರೀಡಾಕೂಟಗಳು ವರ್ಷಂಪ್ರತಿ ನಡೆದುಕೊಂಡು ಬರುತ್ತಿದೆ. ಇದೇ ರೀತಿಯಾಗಿ ಸರಕಾರಿ ನೌಕರರು ಕಳೆದು ಒಂದೆರಡು
(ಮೊದಲ ಪುಟದಿಂದ) ವರ್ಷದಿಂದಿ ಕ್ರೀಡಾ ಹಬ್ಬವಾಗಿ ತಾವೂ ಒತ್ತಡ ಮರೆಯುತ್ತಿದ್ದಾರೆ.
ಸಮವಸ್ತ್ರ ಧರಿಸುವ ವಿವಿಧ ಇಲಾಖಾ ಸಿಬ್ಬಂದಿಗಳು, ಐ.ಎ.ಎಸ್., ಐ.ಪಿ.ಎಸ್., ಐ.ಎಫ್.ಎಸ್. ನಂತಹ ಉನ್ನತ ಹುದ್ದೆಯ ಅಧಿಕಾರಿಗಳನ್ನು ಹೊರತುಪಡಿಸಿ ಇನ್ನಿತರ ಇಲಾಖಾ ಸಿಬ್ಬಂದಿಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಾರೆ. ವೈದ್ಯರು, ಶಿಕ್ಷಕರು, ಶುಶ್ರೂಷಕಿಯರು ಸೇರಿದಂತೆ ಹಲವಾರು ಬಗೆಯ ಸರಕಾರಿ ಉದ್ಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಈ ಕ್ರೀಡಾಕೂಟ ಮುದ ನೀಡುತ್ತದೆ. ಪುರುಷರು, ಮಹಿಳೆಯರಿಗೆ ಸೇರಿದಂತೆ ವಿವಿಧ ವಿಭಾಗದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಕಬಡ್ಡಿ, ಕ್ರಿಕೆಟ್, ಈಜು, ಥ್ರೋಬಾಲ್, ಟೆನಿಕಾಯ್ಟ್ ಸೇರಿದಂತೆ ವಿವಿಧ ಕ್ರೀಡಾ ಪೈಪೋಟಿಯೊಂದಿಗೆ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಿ ಸಾಂಸ್ಕøತಿಕ ಸ್ಪರ್ಧೆಗಳು ಸರಕಾರಿ ನೌಕರರ ಕ್ರೀಡಾ ಹಬ್ಬದ ವಿಶೇಷ.
ವಿವಿಧ ಕ್ರೀಡಾ ಸ್ಪರ್ಧೆಗಳೊಂದಿಗೆ ಸಾಂಸ್ಕøತಿಕ ಚುಟವಟಿಕೆಗಳಾಗಿ ಹಿಂದೂ ಸ್ಥಾನಿ ಸಂಗೀತ, ಕರ್ನಾಟಕ ಸಂಗೀತ, ನೃತ್ಯ, ಜಾನಪದ ಗೀತೆ, ಕರಕುಶಲ ವಸ್ತುಗಳ ಪ್ರದರ್ಶನ, ಕಿರುನಾಟಕ, ಪರಕೇಶನ್ ವಾದ್ಯಗಳು, ಸ್ಪ್ರಿಂಗ್ ವಾದ್ಯ ಇತ್ಯಾದಿ ಸ್ಪರ್ಧೆಗಳು ನೌಕರರ ವರ್ಗದಲ್ಲಿನ ಜಂಜಾಟ ಮರೆಸುವಂತಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸರಕಾರಿ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಎರಡು ದಿನಗಳ ಸರಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕೂಟಕ್ಕೆ ಇಂದು ಚಾಲನೆ ದೊರೆಯಿತು. ಪ್ರಥಮ ದಿನದಂದು ಬಹುತೇಕ ಕ್ರೀಡಾ ಸ್ಪರ್ಧೆಗಳು ನಡೆದಿದ್ದು, ತಾ. 7ರಂದು (ಇಂದು) ಕ್ರೀಡಯ ಮುಂದುವರಿದ ಭಾಗದೊಂದಿಗೆ ಸಾಂಸ್ಕøತಿಕವಾಗಿ ನೌಕರರ ಪ್ರತಿಭೆ ಅನಾವರಣಗೊಳ್ಳಲಿದೆ.
ಹಬ್ಬದ ರೀತಿಯಲ್ಲಿ ಮೂಡಿ ಬರಲಿ : ರಂಜನ್
ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಸರಕಾರಿ ನೌಕರರ ಕ್ರೀಡಾಕೂಟದ ಮೂಲಕ ವರ್ಷಂಪ್ರತಿ ಬದಲಾವಣೆ ಕಾಣಲಿ, ಸಂಘದ ಎಲ್ಲರೂ ಸಾಮೂಹಿಕವಾಗಿ ಕ್ರೀಡಾಸ್ಪೂರ್ತಿಯೊಂದಿಗೆ ಪಾಲ್ಗೊಂಡು ಹಬ್ಬದ ರೀತಿಯಲ್ಲಿ ಈ ಕಾರ್ಯಕ್ರಮ ಮುಂದುವರಿಸಿಕೊಂಡು ಹೋಗಲು ಸಲಹೆಯಿತ್ತರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಮಾತನಾಡಿ ದಿನನಿತ್ಯದ ಬದುಕಿನ ಜಂಜಾಟದಿಂದ ಹೊರ ಬರಲು ಕ್ರೀಡೆ ಸಹಕಾರಿ. ಪ್ರತಿನಿತ್ಯ ಕೆಲಸ ನಿರ್ವಹಿಸುವವರಿಗೆ ಒತ್ತಡ ಇರುತ್ತದೆ. ಇಂತಹ ಕ್ರೀಡಾಕೂಟವನ್ನು ಹಮ್ಮಿಕೊಳ್ಳುವದರಿಂದ ನಿತ್ಯದ ಜಂಜಾಟದಿಂದ ಹೊರಬರಬಹುದು ಹಾಗೂ ಸದೃಡವಾಗಿರಬಹುದು ಇದರೊಂದಿಗೆ ಪರಸ್ಪರ ಅರಿತು ಬೆರೆಯಲು ಸಹಕಾರಿಯಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ ಹರೀಶ್ ಮಾತನಾಡಿ, ದೇಶದ ಪ್ರಗತಿಯಲ್ಲಿ ಸರಕಾರಿ ನೌಕರರ ಪಾತ್ರ ಪ್ರಮುಖವಾದದ್ದು. ದೇಶವನ್ನು ಯಶಸ್ಸಿನತ್ತ ಕೊಂಡೊಯ್ಯಲು ಸರಕಾರಿ ನೌಕರರು ದಿನಂಪ್ರತಿ ಕೆಲಸ ನಿರ್ವಹಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂತಹ ಕ್ರೀಡಾ ಚಟುವಟಿಕೆಯನ್ನು ಹಮ್ಮಿಕೊಳ್ಳುವದರ ಮೂಲಕ ಉದಾಸೀನತೆಯನ್ನು ತೊಡೆದುಹಾಕಬಹುದು. ಪ್ರತಿಯೊಬ್ಬರು ಕ್ರೀಡೆಯಲ್ಲಿ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಬೇಕು ಎಂದು ಮನವಿ ಮಾಡಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಕೆ.ಬಿ. ರವಿ, ಉಪಾಧ್ಯಕ್ಷ ಸಿ.ಎ. ಅಯ್ಯಣ್ಣ, ಡಿಎಫ್‍ಒ ಸೂರ್ಯಸೇನ, ನೌಕರರು ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಇಲಾಖೆಯ ಚಿತ್ರಾವತಿ ಪ್ರಾರ್ಥಿಸಿ, ಕೆ.ಬಿ. ರವಿ ಸ್ವಾಗತಿಸಿದರು. ವೀರಾಜಪೇಟೆ ತಾಲೂಕು ಅಧ್ಯಕ್ಷ ಸಿ.ಎಸ್. ವಿಶ್ವನಾಥ್ ವಂದಿಸಿದರು. ತಾ. 7ರಂದು (ಇಂದು) ಸರಕಾರಿ ನೌಕರರ ಸಂಭ್ರಮ ಮುಂದುವರಿಯಲಿದೆ.