ಸೋಮವಾರಪೇಟೆ,ನ. 18: ಸಮೀಪದ ಕೂತಿ ಕೆರೆಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಪ್ರಾರಂಭವಾಗಿದ್ದು, ಮುಂದಿನ ಒಂದು ವಾರದ ಒಳಗೆ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡದಿದ್ದರೆ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಕಚೇರಿಗೆ ಬೀಗ ಜಡಿಯಲಾಗುವದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.ಗ್ರಾಮಸ್ಥರು ಕುಡಿಯುವ ನೀರಿಗಾಗಿ ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಕಳೆದ ಏಳು ತಿಂಗಳ ಹಿಂದೆ ಜಿಲ್ಲಾ ಪಂಚಾಯಿತಿಯಿಂದ ಕೆರೆಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಲಾಯಿತು. ಮುಂದಿನ 15 ದಿನಗಳ ಒಳಗೆ ಕುಡಿಯುವ ನೀರು ಸರಬರಾಜು ಮಾಡಲಾಗುವದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ 7ತಿಂಗಳು ಕಳೆದರೂ ಕುಡಿಯುವ ನೀರಿನ ಘಟಕ ಉದ್ಘಾಟನೆಗೊಂಡಿಲ್ಲ ಎಂದು ಗ್ರಾಮದ ಪ್ರಮುಖ ಯು.ಕೆ. ಸೋಮಶೇಖರ್ ದೂರಿದರು.
ಪ್ರಾರಂಭದಲ್ಲಿ ಕೊಳವೆ ಬಾವಿ ತೆಗೆದು, ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಪೈಪ್‍ಲೈನ್ ಮತ್ತು ಸಿಸ್ಟನ್ ಅಳವಡಿಸಿಲ್ಲ. ಕುಡಿಯುವ ನೀರು ಕಲ್ಪಿಸುವಂತೆ ಜಿ.ಪಂ. ಸದಸ್ಯ ಬಿ.ಜೆ.ದೀಪಕ್ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಅವರಿಗೆ ಮನವಿ ಮಾಡಿ ಕೊಂಡರೂ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಎರಡು ದಿನಗಳಿಗೊಮ್ಮೆ ಮೂರು ಬಿಂದಿಗೆಯಷ್ಟು ಕುಡಿಯುವ ನೀರು ಸಿಗುತ್ತಿದೆ. ಗ್ರಾಮಸ್ಥರು ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸ್ತ್ರೀಶಕ್ತಿ, ಸ್ವಸಹಾಯ ಸಂಘದ ಸದಸ್ಯರೊಂದಿಗೆ ಗ್ರಾಮಸ್ಥರು, ಜಿ.ಪಂ. ಇಂಜಿನಿ ಯರಿಂಗ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತೇವೆ. ನಂತರ ಜಿ.ಪಂ. ಸಾಮಾನ್ಯ ಸಭೆಗೆ ಘೇರಾವ್ ಹಾಕುತ್ತೇವೆ ಎಂದು ಪ್ರಮುಖರಾದ ಕೆ.ಡಿ.ಗಿರೀಶ್ ಎಚ್ಚರಿಸಿದರು. ಗೋಷ್ಠಿಯಲ್ಲಿ ಗ್ರಾಮದ ಪ್ರಮುಖರಾದ ಸಿ.ಕೆ. ಉದಯ ಕುಮಾರ್, ಬಿ.ಎಸ್. ಸೋಮಶೇಖರ್, ಸಿ.ಯು.ಭರತ್ ಇದ್ದರು.