ಮಡಿಕೇರಿ, ಅ. 8: ಮಡಿಕೇರಿ ತಾಲೂಕು ಕೃಷಿ ಇಲಾಖೆಯ ಅಭಿಯಾನ ಕಾರ್ಯಕ್ರಮ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲ ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ ನೆರವೇರಿಸಿ, ರೈತ ಬಾಂಧವರು ಇಂತಹ ಕಾರ್ಯಕ್ರಮಗಳ ಸದುಪಯೋಗಪಡೆದುಕೊಂಡು ಕೃಷಿ ಕ್ಷೇತ್ರದಲ್ಲಿ ಅಳವಡಿಸಿಕೊಂಡಾಗ ನಿರೀಕ್ಷಿತ ಲಾಭ ಪಡೆಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ವಿವಿಧ ಅಭಿವೃದ್ಧಿ ಇಲಾಖೆಗಳು ಮತ್ತು ಕೃಷಿ ಯಂತ್ರೋಪಕರಣ ಮಳಿಗೆಗಳ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸೌಲಭ್ಯಗಳ ಮಾಹಿತಿ ನಮ್ಮ ಮನೆ ಬಾಗಿಲಿಗೆ ಬಂದಿದೆ. ವಸ್ತು ಪ್ರದರ್ಶನ ಮಳಿಗೆಗಳಲ್ಲಿ ತಾಂತ್ರಿಕ ಮಾಹಿತಿ ಹಾಗೂ ಸೌಲಭ್ಯಗಳ ಮಾಹಿತಿ ಪಡೆದುಕೊಂಡು ಆಧುನಿಕ ಕೃಷಿ ಮಾಡುವಂತರಾಗಿ ಎಂದು ಕಿವಿಮಾತು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಮಣ್ಣು ವಿಜ್ಞಾನಿ ಡಾ. ರವಿಕುಮಾರ್ ಹಾಗೂ ಕೀಟ ಶಾಸ್ತ್ರಜ್ಞ ಡಾ. ವೀರೆಂದ್ರ ಕುಮಾರ್ ಭಾಗವಹಿಸಿ ನೆರೆದಿದ್ದ 250ಕ್ಕೂ ಅಧಿಕ ರೈತ ಬಾಂಧವರಿಗೆ ಅಗತ್ಯ ಮಾಹಿತಿ ನೀಡಿ ಸ್ಥಳದಲ್ಲೇ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಸಂತು ಸುಬ್ರಮಣಿ, ಸದಸ್ಯರಾದ ಉಮಾಪ್ರಭು, ಕೋಡಿಯಂಡ ಇಂದಿರಾ, ಉಪ ಕೃಷಿ ನಿರ್ದೇಶಕ ಕೆ. ರಾಜು, ಸಹಾಯಕ ಕೃಷಿ ನಿರ್ದೇಶಕ ಹೆಚ್.ಎಸ್. ರಾಜಶೇಖರ್, ಫಾರ್ಮರ್ಸ್ ಕ್ಲಬ್ ಅಧ್ಯಕ್ಷ ಕೋಟೆರ ಚಂಗಪ್ಪ, ಶಾಲಾಭಿವೃದ್ಧಿ ಅಧ್ಯಕ್ಷ ಕುಟ್ಟಪ್ಪ ಹಾಜರಿದ್ದರು.
ನವೀನ್ ನಂಜಪ್ಪ ಪ್ರಾರ್ಥಿಸಿದರೆ, ತಾಂತ್ರಿಕ ಅಧಿಕಾರಿ ಎ.ಸಿ. ಗಿರೀಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ನಾಪೋಕ್ಲು ಕೃಷಿ ಅಧಿಕಾರಿ ಎಂ.ಕೆ. ಜಯರಾಂ ವಂದಿಸಿದರು. ಒಟ್ಟಾರೆ ಸ್ಥಳೀಯ ರೈತರಿಗೆ ಒಂದೇ ಸೂರಿನಲ್ಲಿ ಕೃಷಿ ಪ್ರಚಾರ, ಕೃಷಿ ವಸ್ತು ಪದರ್ಶನ, ರೈತರು ಹಾಗೂ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದ ಬಗ್ಗೆ ಅಗತ್ಯ ಮಾಹಿತಿ ಒದಗಿಸಲಾಯಿತು.