ಮಡಿಕೇರಿ, ಜ. 27: ಕರಾವಳಿ ಜಿಲ್ಲೆಯ ಜನಪದ ಕ್ರೀಡೆ ಕಂಬಳವನ್ನು ನಿಷೇಧಿಸಿರುವದು ಖಂಡನೀಯ ವಾಗಿದ್ದು, ನಿಷೇಧವನ್ನು ಹಿಂತೆಗೆದು ಕೊಳ್ಳುವಂತೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತುಳುವೆರ ಜನಪದ ಕೂಟದ ವತಿಯಿಂದ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.ಕರಾವಳಿಯ ಜನಪದ ಕ್ರೀಡೆ ಕಂಬಳವು ವಿಶ್ವವಿಖ್ಯಾತಿ ಪಡೆದಿರುವ ಕ್ರೀಡೆಯಾಗಿದ್ದು, ತಲೆತಲಾಂತರಗಳಿಂದ ಜನಪದ ಕ್ರೀಡೆಯಾಗಿ ಬೆಳೆದು ಬಂದಿರುತ್ತದೆ. ಕಂಬಳ ಕ್ರೀಡೆಗೆ ಸುಮಾರು 800 ರಿಂದ 900 ವರ್ಷಗಳ ಇತಿಹಾಸವಿದ್ದು, ಇದನ್ನು ನಿಷೇಧಿಸಿರುವದು ವಿಷಾದನೀಯ ವಾಗಿದೆ. ಕಂಬಳ ಕ್ರೀಡೆ ಕರಾವಳಿಯ ಮಣ್ಣಿನ ಕ್ರೀಡೆಯಾಗಿದ್ದು, ಕಂಬಳದಲ್ಲಿ ಬಳಸುವ ಕೋಣವನ್ನು ರೈತ ತನ್ನ ಮಗುವಿನಂತೆಯೇ ಸಾಕುತ್ತಾನೆ. ಅದಕ್ಕಾಗಿ ಲಕ್ಷಾಂತರ ಹಣವನ್ನು ಖರ್ಚು ಮಾಡುತ್ತಾನೆ. ಮಾತ್ರವಲ್ಲದೆ ಕೋಣವನ್ನು ವರ್ಷದಲ್ಲಿ ಕೇವಲ ಒಂದೆರೆಡು ಬಾರಿ ಮಾತ್ರ ಕ್ರೀಡೆಗೆ ಬಳಸುವದರಿಂದ ಪ್ರಾಣಿ ಹಿಂಸೆ ಹೆಸರಿನಲ್ಲಿ ನಿರ್ಬಂಧಿಸಿರುವದು ಸರಿಯಲ್ಲ. ಆದ್ದರಿಂದ ಸರಕಾರವು ಜನಪದ ಕ್ರೀಡೆ ಕಂಬಳದ ಮೇಲಿನ ನಿಷೇಧವನ್ನು ತೆರವುಗೊಳಿಸಿ ಸುಗ್ರಿವಾಜ್ಞೆ ಹೊರಡಿಸಿ ಮುಂದಿನ ಪೀಳಿಗೆಗೆ
(ಮೊದಲ ಪುಟದಿಂದ) ಈ ಕ್ರೀಡೆಯನ್ನು ಉಳಿಸಿ ಬೆಳೆಸುವಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು. ಈ ಸಂದರ್ಭ ತುಳುವೆರ ಜನಪದ ಕೂಟದ ಜಿಲ್ಲಾಧ್ಯಕ್ಷ ಶೇಖರ್ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ, ಮಡಿಕೇರಿ ತಾಲೂಕು ಅಧ್ಯಕ್ಷ ಪ್ರಭು ರೈ, ಪ್ರಮುಖರಾದ ಬಿ.ಡಿ. ನಾರಾಯಣ ರೈ, ಆನಂದ ಹಾಗೂ ಇನ್ನಿತರರು ಇದ್ದರು.