ಸೋಮವಾರಪೇಟೆ, ನ. 20: ಸಮೀಪದ ಗಣಗೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದ್ದ ಕಂಪ್ಯೂಟರ್ ಕಳವು ಪ್ರಕರಣವನ್ನು ಭೇದಿಸಿರುವ ಸ್ಥಳೀಯ ಪೊಲೀಸರು, 8 ತಿಂಗಳ ನಂತರ ಕಳವು ಆರೋಪಿಯನ್ನು ಬಂಧಿಸಿದ್ದಾರೆ.

ಗಣಗೂರು ಗ್ರಾಮದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ ತಾ. 9.03.2016 ರಂದು ಕೊಠಡಿಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ಕೊಠಡಿ ಯೊಳಗಿದ್ದ ಒಂದು ಕಂಪ್ಯೂಟರ್‍ನ್ನು ಕಳವು ಮಾಡಿದ್ದರು. ಸುಮಾರು 15 ಸಾವಿರ ಮೌಲ್ಯದ ಕಂಪ್ಯೂಟರ್ ಕಳುವಾಗಿರುವ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್ತೆಲಾ ಸಿಲ್ವಾ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಅದರಂತೆ ತನಿಖೆ ಕೈಗೊಂಡ ಪೊಲೀಸರು ಕಳುವಾಗಿದ್ದ ಕಂಪ್ಯೂಟರ್ ಸಹಿತ ಗಣಗೂರು ಗ್ರಾಮದ ನಿಂಗಯ್ಯ ಅವರ ಪುತ್ರ ರವಿಕುಮಾರ್ ಎಂಬಾತನನ್ನು ಇದೀಗ ಬಂಧಿಸಿದ್ದು, ಕಂಪ್ಯೂಟರ್ ವಶಕ್ಕೆ ಪಡೆದಿದ್ದಾರೆ. ಕಳವು ಮಾಡಿದ ನಂತರ ರವಿಕುಮಾರ್ ಬೆಂಗಳೂರು ಸೇರಿದಂತೆ ಇತರೆಡೆ ತಲೆಮರೆಸಿಕೊಂಡಿದ್ದು, ನಿನ್ನೆ ಗ್ರಾಮಕ್ಕೆ ಆಗಮಿಸಿದ ಸಂದರ್ಭ ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಠಾಣಾಧಿ ಕಾರಿ ಮಂಚಯ್ಯ, ಹೆಡ್‍ಕಾನ್ಸ್‍ಟೇಬಲ್ ರಮೇಶ್, ಸಿಬ್ಬಂದಿ ಸಂದೇಶ್, ಗೃಹ ರಕ್ಷಕ ಸಿಬ್ಬಂದಿ ಶಿವಕುಮಾರ್ ಅವರುಗಳು ಭಾಗವಹಿಸಿದ್ದರು.