ಸುಂಟಿಕೊಪ್ಪ, ಜ. 22: ಸುಂಟಿಕೊಪ್ಪ ನಾಡು ಕಛೇರಿಯಲ್ಲಿದ್ದ ಕಂದಾಯ ಪರಿವೀಕ್ಷಕರು ನಿವೃತ್ತರಾದ ನಂತರ ಅವರ ಸ್ಥಾನಕ್ಕೆ ಮತ್ತೋರ್ವರನ್ನು ನೇಮಿಸದೆ ಇರುವದರಿಂದ ಕಂದಾಯ ಕಚೇರಿಗೆ ಕೆಲಸ ಕಾರ್ಯದ ನಿಮಿತ್ತ ಬರುವ ಸಾರ್ವಜನಿಕರು ಪಡಿಪಾಟಿಲು ಪಡುವಂತಾಗಿದೆ ಎಂದು ಸುಂಟಿಕೊಪ್ಪ ಹೋಬಳಿ ಕರವೇ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.
ಸುಂಟಿಕೊಪ್ಪದ ಹೋಬಳಿ ನಾಡು ಕಛೇರಿಗೆ ಪ್ರತಿನಿತ್ಯ ನೂರಾರು ಮಂದಿ ವಾಸದ ಧೃಡೀಕರಣ, ಜನನ, ಮರಣ, ಜಾತಿ, ಇನ್ನಿತರ ಅಗತ್ಯ ಕಂದಾಯ ಧೃಡೀಕರಣ ಪತ್ರಗಳಿಗಾಗಿ ಬರುತ್ತಿದ್ದಾರೆ. ಈ ಕಛೇರಿಯಲ್ಲಿ ಪ್ರಭಾರ ಉಪ ತಹಶೀಲ್ಧಾರ್‍ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರಯ್ಯ ಅವರು 2 ಹುದ್ದೆಯನ್ನು ನಿರ್ವಹಿಸುತ್ತಿದ್ದು, ಸೆ. 30 ರಂದು ನಿವೃತ್ತರಾದರು. ಆನಂತರ ಇವರು ನಿರ್ವಹಿಸುತ್ತಿದ್ದ ಸ್ಥಾನಕ್ಕೆ ಕಂದಾಯ ಇಲಾಖೆಯಿಂದ ಯಾರನ್ನು ನೇಮಿಕಗೊಳಿಸಲು ಮುಂದಾಗಿಲ್ಲ. ಹಿರಿಯ ಲೆಕ್ಕಿಗರಾದ ನಾಗೇಶ್‍ರಾವ್ ಅವರಿಗೆ ಪ್ರಭಾರ ಕಂದಾಯ ನಿರೀಕ್ಷಕರಾಗಿ ಹೊಣೆ ನೀಡಲಾಗಿದ್ದರೂ ಅವರು ಪರಿಮಿತಿ ಒಳಗೆ ಕರ್ತವ್ಯ ನಿರ್ವಹಿಸಬೇಕಾಗಿದೆ.
ವಾಸ ದೃಢೀಕರಣ, ಜಾತಿ, ಜನನ, ಮರಣ ಆದಾಯ ದೃಢೀಕರಣ, ಕೃಷಿ ಸಂಬಂಧಿಸಿದ ಪತ್ರ ಕೋರಿ ಬರುವ ಸಾರ್ವಜನಿಕರು ಅಗತ್ಯವಾಗಿ ಕಂದಾಯ ಪರಿವೀಕ್ಷಕರ ಸಹಿ ಅನುಮೋದನೆ ಪಡೆಯ ಲೇಬೇಕಾಗಿದೆ. ಕುಶಾಲನಗರ ಉಪ ತಹಶೀಲ್ದಾರರಿಗೆ ಹೆಚ್ಚಿನ ಜವಾಬ್ಧಾರಿಯನ್ನು ನೀಡಿರುವದರಿಂದ ಸುಂಟಿಕೊಪ್ಪಕ್ಕೆ ಬಂದ ಎಲ್ಲಾ ಅರ್ಜಿಗಳನ್ನು ಟಪಾಲು ಮೂಲಕ ಕುಶಾಲನಗರ ಕಂದಾಯ ಇಲಾಖೆಗೆ ರವಾನಿಸಿ ಅಲ್ಲಿನ ಉಪ ತಹಶೀಲ್ದಾರ್ ಸಹಿ ಪಡೆದು ಬರುವಾಗ ವಾರಗಟ್ಟಲೇ ವಿಳಂಬವಾಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಕುಶಾಲನಗರ ಹೋಬಳಿ ಕಂದಾಯ ಕಚೇರಿಯು ಬಹುದೊಡ್ಡ ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಸುಂಟಿಕೊಪ್ಪದ ನಾಡು ಕಚೇರಿಯ ಕೆಲಸವನ್ನು ನೆರವೇರಿಸಲು ಅಲ್ಲಿನ ಅಧಿಕಾರಿಗಳಿಗೆ ಪ್ರಯಾಸವಾಗುತ್ತಿದೆ.
ಆದುದರಿಂದ ಜನರ ಸಮಸ್ಯೆ ಗಳನ್ನು ಮನಗಂಡು ತಾಲೂಕು ತಹಶೀಲ್ದಾರರು, ಜಿಲ್ಲಾಧಿಕಾರಿಗಳು ಕೂಡಲೇ ಸುಂಟಿಕೊಪ್ಪ ನಾಡು ಕಚೇರಿಗೆ ಕಂದಾಯ ಪರಿವೀಕ್ಷಕರು ಹಾಗೂ ಉಪತಹಶೀಲ್ದಾರರನ್ನು ನೇಮಿಸಬೇಕೆಂದು ಸುಂಟಿಕೊಪ್ಪ ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾಗೇಶ್ ಪೂಜಾರಿ ಪ್ರಧಾನ ಕಾರ್ಯದರ್ಶಿ ದಿನು, ಉಪಾಧ್ಯಕ್ಷ ಮಂಜುನಾಥ ಸಲಹೆಗಾರ ಅಶೋಕ ಆಗ್ರಹಿಸಿದ್ದಾರೆ.
ತಪ್ಪಿದಲ್ಲಿ 1 ವಾರದ ನಂತರ ನಾಡು ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವದೆಂದೂ ಎಚ್ಚರಿಸಿದ್ದಾರೆ.