ವೀರಾಜಪೇಟೆ, ಸೆ. 10: ವೀರಾಜಪೇಟೆ ಮೀನುಪೇಟೆಯ ಮುತ್ತಪ್ಪ ಕಲಾ ಮಂಟಪದಲ್ಲಿ ತಾ. 18 ರಂದು 8ನೇ ವರ್ಷದ ಓಣಂ ಹಬ್ಬವನ್ನು ಆಚರಿಸಲಾಗುವದು ಎಂದು ಓಣಂ ಹಬ್ಬ ಆಚರಣಾ ಸಮಿತಿ ಅಧ್ಯಕ್ಷ ಇ.ಸಿ. ಜೀವನ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ತಾ. 18 ರಂದು ಪೂರ್ವಾಹ್ನ 8 ಗಂಟೆಗೆ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನದ ಅಧ್ಯಕ್ಷ ಕೆ.ಎಸ್. ಬಾಲಕೃಷ್ಣನ್ ಉದ್ಘಾಟಿಸಲಿದ್ದಾರೆ. 8.30 ಗಂಟೆಗೆ ಹೂವಿನ ರಂಗೋಲಿ (ಪೂಕಳಂ) ಸ್ಪರ್ಧೆ, 9 ಗಂಟೆಗೆ ಮುತ್ತಪ್ಪ ಕಲಾ ಮಂಟಪದಿಂದ ಪಟ್ಟಣದ ಮುಖ್ಯ ಬೀದಿಯಲ್ಲಿ ಸಿಂಗಾರಿ ಮೇಳ ಹಾಗೂ ಪೂಕಾವಡಿಯೊಂದಿಗೆ ಮಹಾಬಲಿಯ ಮೆರವಣಿಗೆ, 12.30 ಗಂಟೆಗೆ ಓಣಂ ಸದ್ಯ, 2 ಗಂಟೆಗೆ ತಿರುವಾದಿರ ಕಳಿ, 2.30 ಗಂಟೆಗೆ ಕಾಮಿಡಿ ಎಕ್ಸ್ಪ್ರೆಸ್ ತಂಡದವರಿಂದ ಕಾಮಿಡಿ ಶೋ, 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ, ಕೊಡಗು ಜಿಲ್ಲಾ ಎಸ್.ಎನ್.ಡಿ.ಪಿ. ಅಧ್ಯಕ್ಷ ಕೆ.ಎನ್. ವಾಸು ಉಪಸ್ಥಿತರಿರುವರು. ಇದೇ ಸಂದರ್ಭ 50 ಬಡ ಕುಟುಂಬಗಳಿಗೆ ಓಣಂ ಕಿಟ್ಗಳನ್ನು ವಿತರಿಸಲಾಗುವದು ಎಂದು ಹೇಳಿದರು.
ಕಾರ್ಯದರ್ಶಿ ಸಿ.ಆರ್. ಬಾಬು ಮಾತನಾಡಿ, ಪೂಕಳಂ ಸ್ಪರ್ಧೆಯಲ್ಲಿ ಭಾಗವಹಿಸಲು ಬೆಳಿಗ್ಗೆ 8 ಗಂಟೆಯೊಳಗೆ ಬರುವವರಿಗೆ ಮಾತ್ರ ಅವಕಾಶ. ಒಂದು ತಂಡದಲ್ಲಿ ನಾಲ್ಕು ಸದಸ್ಯರು ಮಾತ್ರ ಭಾಗವಹಿಸಬಹುದು. 5x5 ಅಡಿ ಚೌಕಟ್ಟಿನೊಳಗೆ ಮಾತ್ರ ರಂಗೋಲಿ ಇರಬೇಕು, ಹೂವುಗಳನ್ನು ಮಾತ್ರ ಉಪಯೋಗಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ವೀರಾಜಪೇಟೆ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಹಿಂದೂ ಮಲೆಯಾಳಿಗಳಿಗೆ ಮಾತ್ರ ಅವಕಾಶ. ಕಳೆದ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂರು ಹಿಂದೂ ಮಲೆಯಾಳಿ ಮಕ್ಕಳಿಗೆ ಬಹುಮಾನವನ್ನು ನೀಡಲಾಗುವದು. ಅಂಕ ಪಟ್ಟಿ ಹಾಗೂ ಹೂವಿನ ರಂಗೋಲಿಯಲ್ಲಿ ಭಾಗವಹಿಸುವವರು ಕಾರ್ಯದರ್ಶಿ ಸಿ.ಆರ್ ಬಾಬು 9731258197, ಸಿ.ಆರ್. ಸಜೀವನ್ 9448721118 ಇವರುಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಹಕಾರ್ಯದರ್ಶಿ ಎಂ.ಎಸ್. ಸತೀಶ್, ಕೆ.ಎನ್. ಉಪೇಂದ್ರ ಉಪಸ್ಥಿತರಿದ್ದರು.