ಪೊನ್ನಂಪೇಟೆ, ಅ. 19: ಅರಣ್ಯ ಒತ್ತುವರಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪಿಯೋರ್ವನನ್ನು ಖುಲಾಸೆ ಗೊಳಿಸಿದೆ. ವೀರಾಜಪೇಟೆ ತಾಲೂಕು ನಾಗರಹೊಳೆ ಹುಲಿ ರಕ್ಷಿತಾ ಅರಣ್ಯ ವ್ಯಾಪ್ತಿಯ ಪ್ರದೇಶವಾದ ಆನೆ ಚೌಕೂರು ವನ್ಯಜೀವಿ ವಲಯ ಮತ್ತಿಗೋಡು ಶಾಖೆಯ ಕೇಂಬುಕೊಲ್ಲಿ ಅರಣ್ಯ ಭಾಗದಲ್ಲಿ ಸುಳುಗೋಡು ಗ್ರಾಮದ ದಾಮೋದರ ಎಂಬವರು ಅರಣ್ಯ ಒತ್ತುವರಿ ಮಾಡಿದ ಆರೋಪದ ಬಗ್ಗೆ ಆನೆ ಚೌಕೂರು ವನ್ಯಜೀವಿ ವಲಯ ಅರಣ್ಯಾಧಿಕಾರಿ ಗಳು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸಿ ಪೊನ್ನಂಪೇಟೆ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ದಾಮೋದರ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಸದರಿ ಆರೋಪಿಯ ತಂದೆ ಕುಂಜಪ್ಪ ಅವರು 1972 ರಲ್ಲಿ ಸರಕಾರಿ ಜಾಗ ದಲ್ಲಿ ಮನೆ ನಿರ್ಮಿಸಿ, ಭತ್ತದ ಕೃಷಿ, ಕಾಫಿ ತೋಟ ಮಾಡಿಕೊಂಡಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಮೋಹನ್ ಗೌಡ ಅವರು ಆರೋಪಿಯ ವಿರುದ್ಧ ಸಾಕ್ಷ್ಯಾಧಾರಗಳು ಸಾಬೀತಾಗದ ಹಿನ್ನೆಲೆಯಲ್ಲಿ ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಯ ಪರ ವಕೀಲ ಮಚ್ಚಾಮಾಡ ಟಿ. ಕಾರ್ಯಪ್ಪ ವಾದ ಮಂಡಿಸಿದರು.