ಸುಂಟಿಕೊಪ್ಪ, ನ. 13: ಸುಂಟಿಕೊಪ್ಪ ಹೋಬಳಿಯ ಕಂದಾಯ ವ್ಯಾಪ್ತಿಯ ನಾಕೂರು ಶಿರಂಗಾಲದಲ್ಲಿ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡವರ ಜಾಗವನ್ನು ತಾಲೂಕು ತಹಶೀಲ್ದಾರ್ ಆದೇಶದಂತೆ ಸರ್ವೆ ನಡೆಸಿ ಕಂದಾಯ ಇಲಾಖೆ ಅಧಿಕಾರಿಗಳು ತೆಗೆದುಕೊಂಡಿದ್ದಾರೆ.ಸರಕಾರದ ಆದೇಶದಂತೆ ಸರಕಾರಿ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡ ಜಾಗವನ್ನು ತೆರವುಗೊಳಿಸುವ ಪಕ್ರಿಯೆಗೆ ಚಾಲನೆಗೆ ನೀಡಿದ ತಹಶೀಲ್ದಾರರು ಕಂದಾಯ ಪರಿವೀಕ್ಷಕರು, ಗ್ರಾಮಲೆಕ್ಕಿಗರು ಹಾಗೂ ಸರ್ವೇ ಸಿಬ್ಬಂದಿಗಳನ್ನು ನಾಕೂರು ಶಿರಂಗಾಲಕ್ಕೆ ಕಳುಹಿಸಿ ಸರಕಾರಿ ಜಾಗ ಪತ್ತೆ ಹಚ್ಚಲು ಸೂಚಿಸಿದರು. ಅದರಂತೆ ನಾಕೂರು ಶಿರಂಗಾಲ ಗ್ರಾಮದ ಸರ್ವೆ ನಂ. 42/ ‘ಪಿ’ ರಲ್ಲಿ ಪಾರಂಗಡ ರವಿ ಅಲಿಯಾಸ್ ಬೋಪಣ್ಣ 0.80 ಸೆಂಟ್, ಬಿ.ಜಿ. ರಮೇಶ್, ಬಿ.ಜಿ. ನರೇಂದ್ರ ಅವರುಗಳು ಒಂದೆಡೆ 2.60 ಹಾಗೂ ಮತ್ತೊಂದೆಡೆ 0.45 ಸೆಂಟ್, ಶೈಲಜಾ 1.10 ಎಕರೆ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ರೂಡಿಸಿಕೊಂಡಿರುವದನ್ನು ಪತ್ತೆ ಹಚ್ಚಲಾಗಿದೆ. ಈ ಸರ್ವೆ ನಂಬರಿನಲ್ಲಿ 1.20 ಖಾಲಿ ಜಾಗವಿದ್ದು, 1 ಎಕರೆ 30 ಸೆಂಟು ರಸ್ತೆಗೆ ಮೀಸಲಾಗಿರುವದು ಸರ್ವೇಯಿಂದ ತಿಳಿದು ಬಂದಿದೆ.
ತಹಶೀಲ್ದಾರರು ಒತ್ತುವರಿ ಮಾಡಿಕೊಂಡವರಿಗೆ ನೋಟಿಸು ಜಾರಿಗೊಳಿಸಿ ಉತ್ತರ ನೀಡಲು ಸೂಚಿಸಿದರೂ ಯಾವದೇ ಪ್ರತಿಕ್ರಿಯೆ ಮೌಖಿಕವಾಗಿ ಅಥವಾ ಲಿಖಿತವಾಗಿ ನೀಡದಿರುವದರಿಂದ ಕಂದಾಯ ಇಲಾಖೆ ನಿಯಮದಡಿ ಈ ಜಾಗವನ್ನು ಕಂದಾಯ ಇಲಾಖೆ ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಬಾರ ಕಂದಾಯ ಪರಿವೀಕ್ಷಕ ನಾಗೇಶ್ ತಿಳಿಸಿದ್ದಾರೆ.