ಮಡಿಕೇರಿ, ನ. 10: ಈ ವರ್ಷ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಮುಂಗಾರು ಮಳೆ ಶೇ. 20 ರಿಂದ 30 ರಷ್ಟು ಕಡಿಮೆಯಾಗಿರುವದು ಕಂಡುಬಂದಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಸರಾಸರಿ ಮಳೆಗಿಂತ ಮುಂಗಾರು ಮಳೆ ತುಂಬಾ ಕಡಿಮೆಯಾಗಿದೆ. ಇದರಿಂದಾಗಿ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಮಣ್ಣಿನಲ್ಲಿ ನೀರಿನ ತೇವಾಂಶ ಕಡಿಮೆಯಾಗಿದೆ. ಅಲ್ಲದೆ ಹಿಂಗಾರು ಮಳೆ ಕೂಡ ಕಡಿಮೆಯಾಗುವ ಸಂಭವವಿದೆ. ಇದರಿಂದಾಗಿ ಹಳ್ಳ ಕೊಳ್ಳಗಳಲ್ಲಿ ನೀರಿನ ಶೇಖರಣೆ ಕಡಿಮೆಯಾಗಿ ನೀರಿನ ಕೊರತೆ ಉಂಟಾಗಬಹುದು. ಅನಾವೃಷ್ಟಿಯಿಂದ ಒಣಹವೆ ದೀರ್ಘಕಾಲ ಮುಂದುವರಿದಿದ್ದಲ್ಲಿ ಸಣ್ಣ ಗಿಡಗಳು ಅಲ್ಲದೆ ದೊಡ್ಡ ಗಿಡಗಳ ರೆಕ್ಕೆಗಳು ಒಣಗಿ ಹೋಗುವ ಸಾಧ್ಯತೆಗಳಿವೆ. ಆದ್ದರಿಂದ ಹೂ ಬಿಡುವ ಸಮಯದಲ್ಲಿ ಹೂವಿನ ವಿಕಾರತೆಗಳು ಹೆಚ್ಚಿ ಕಾಯಿ ಕಟ್ಟುವದು ಕಡಿಮೆಯಾಗಿ ಫಸಲು ಇಳಿಮುಖವಾಗುವ ಸಾಧ್ಯತೆಗಳಿವೆ. ಇಂತಹ ಸಂದರ್ಭಗಳಲ್ಲಿ ಕಾಫಿ ಬೆಳೆಗಾರರು ಪೌಷ್ಟಿಕಾಂಶಗಳ ಮಿಶ್ರಣವನ್ನು ಸಿಂಪರಣೆಮಾಡಿ ಕಾಫಿ ಗಿಡಗಳನ್ನು ಸಂರಕ್ಷಣೆ ಮಾಡಿಕೊಳ್ಳಬಹುದು. ಕೇಂದ್ರಿಯ ಕಾಫಿ ಸಂಶೋಧನಾ ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ನಡೆಸಿದ ಸಂಶೋಧನೆಗಳ ಫಲಿತಾಂಶದಿಂದ ಈ ಪೌಷ್ಟಿಕಾಂಶದ ಸಿಂಪರಣೆಯಿಂದ ಗಿಡಗಳಿಗೆ ಒಣಹವೆಯಿಂದಾಗಿ ಉಂಟಾಗುವ ತೊಂದರೆಯನ್ನು ತಪ್ಪಿಸಿ ಫಸಲಿಗೆ ಆಗುವ ಹಾನಿಯನ್ನು ಕಡಿಮೆ ಮಾಡಬಹುದು ಎಂದು ಕಾಫಿ ಮಂಡಳಿ ತಿಳಿಸಿದೆ.
ಕಾಫಿ ತೋಟಗಳಲ್ಲಿ ಬರ ನಿರ್ವಹಣೆ ಕ್ರಮಗಳು: 5 ವರ್ಷಕ್ಕಿಂತ ಕಡಿಮೆಯಿರುವ ಅರೇಬಿಕಾ ಮತ್ತು ರೊಬಸ್ಟಾ ಗಿಡಗಳಿಗೆ ಪೌಷ್ಟಿಕಾಂಶಗಳ ಮಿಶ್ರಣವನ್ನು ಸಿಂಪರಣೆ ಮಾಡಬೇಕು. ಪ್ರತಿ 200 ಲೀಟರ್ ನೀರಿಗೆ 1/2 ಕೆ.ಜಿ. ಯೂರಿಯ, 1/2 ಕೆ.ಜಿ. ಸಿಂಗಲ್ ಸೂಪರ್ ಫಾಸ್ಫೇಟ್, 375 ಗ್ರಾಂ ಮ್ಯುರೇಟ ಆಫ್ ಪೊಟ್ಯಾಷ್, 1/2 ಕೆ.ಜಿ. ಜಿಂಕ್ ಸಲ್ಫಟ್ ಮತ್ತು 50 ಮಿಲಿ ಲೀಟರ್ ಪ್ಲಾನೋಫಿಕ್ಸ್‍ನ್ನು ಮಿಶ್ರಣ ಮಾಡಿ ಗಿಡಗಳಿಗೆ ಸಿಂಪರಣೆ ಮಾಡಬೇಕು. ಗಿಡಗಳ ಗಾತ್ರಕ್ಕೆ ತಕ್ಕದಾಗಿ, ಒಂದು ಗಿಡಕ್ಕೆ 100 ಮಿ.ಲೀ.ನಿಂದ 300 ಮಿ.ಲಿ ಮಿಶ್ರಣ ಬೇಕಾಗಬಹುದು. ಈ ಸಿಂಪರಣೆಯನ್ನು ನವೆಂಬರ್ ತಿಂಗಳಿನ ಎರಡನೇ ವಾರದಲ್ಲಿ ಮಾಡಬೇಕಾಗುತ್ತದೆ. ಒಣಹವೆ ಮತ್ತು ಮಣ್ಣಿನಲ್ಲಿ ತೇವಾಂಶ ಕೊರತೆ ಮುಂದುವರೆದಿದ್ದಲ್ಲಿ 45 ದಿವಸಕ್ಕೊಮ್ಮೆ ಬೇಸಿಗೆ ಮಳೆ ಬರುವ ತನಕ ಪುನಃ ಸಿಂಪಡಿಸುತ್ತಿರಬೇಕು.
ಬೆಳೆದ ರೊಬಸ್ಟಾ ಗಿಡಗಳಿಗೆ ಪ್ರತಿ 200 ಲೀಟರ್ ನೀರಿಗೆ 1 ಕೆ.ಜಿ. ಯೂರಿಯ, 1 ಕೆ.ಜಿ. ಸಿಂಗಲ್ ಸೂಪರ್ ಫಾಸ್ಫೇಟ್, 750 ಗ್ರಾಂ ಮ್ಯುರೇಟ ಆಪ್ ಪೊಟ್ಯಾಷ್, 1 ಕೆ.ಜಿ. ಜಿಂಕ್ ಸಲ್ಫೆಟ್ ಮತ್ತು 75 ಮಿ.ಲೀ. ಪ್ಲಾನೋಫಿಕ್ಸ್ ಅನ್ನು ಚೆನ್ನಾಗಿ ಮಿಶ್ರಣ ಮಾಡಿ ಗಿಡಗಳಿಗೆ ಸಿಂಪರಣೆ ಮಾಡಬೇಕು.
ಈ ಸಿಂಪರಣೆಯನ್ನು ನವೆಂಬರ್ ತಿಂಗಳಿನ ಎರಡನೇ ವಾರದಲ್ಲಿ ಕೊಡಬೇಕಾಗುತ್ತದೆ. ಒಣ ಹವೆ ಮತ್ತು ಮಣ್ಣಿನಲ್ಲಿ ತೇವಾಂಶ ಕೊರತೆ ಮುಂದುವರೆದಿದ್ದಲ್ಲಿ ಈ ಸಿಂಪರಣೆಯನ್ನು 45 ದಿವಸಕ್ಕೊಮ್ಮೆ ಬೇಸಿಗೆ ಮಳೆ ಬರುವ ತನಕ ಪುನರ್ವತಿಸಬೇಕು. ಈ ಕ್ರಮಗಳನ್ನು ಅನುಸರಿಸುವದರಿಂದ ಮಣ್ಣಿನ ತೇವಾಂಶದ ಕೊರತೆಯಿಂದಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಿ ಗಿಡಗಳ ಉತ್ತಮ ಬೆಳವಣಿಗೆಯನ್ನು ಕಾಪಾಡಿಕೊಂಡು ಲಾಭದಾಯಕ ಇಳುವರಿಯನ್ನು ಪಡೆಯಬಹುದು ಎಂದು ಕೇಂದ್ರಿಯ ಕಾಫಿ ಸಂಶೋಧನಾ ಸಂಸ್ಥೆಯ ಸಂಶೋಧನಾ ನಿರ್ದೇಶಕರು ತಿಳಿಸಿದ್ದಾರೆ.