ಮಡಿಕೇರಿ ಜ. 12: ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿಯಲ್ಲಿ ಎರಡು ಎಕರೆ ಜಾಗವನ್ನು ಖರೀದಿಸಿ ಸ್ವಂತ ಕಚೇರಿಯನ್ನು ನಿರ್ಮಾಣ ಮಾಡಲು ನಿರ್ಧಾರ ಕೈಗೊಂಡಿರುವ ಕೊಡಗು ಜಿಲ್ಲಾ ಒಕ್ಕಲಿಗರ ಸಂಘ, ಆರ್ಥಿಕ ಕ್ರೋಢೀಕರಣಕ್ಕಾಗಿ ಆರ್ಥಿಕ ಸಮಿತಿಯೊಂದನ್ನು ರಚಿಸಿದೆ.

ನಗರದ ಹೊಟೇಲ್ ರಾಜ್ ಸಭಾಂಗಣದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ. ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯತ್ವ ಅಭಿಯಾನ ನಡೆಸುವ ಕುರಿತು ಚರ್ಚಿಸಲಾಯಿತು. ಪ್ರಸ್ತುತ ಸಂಘದಲ್ಲಿ ನಾಲ್ಕು ಸಾವಿರ ಸದಸ್ಯರಿದ್ದು, ಮಾರ್ಚ್ ಅಂತ್ಯದೊಳಗೆ ಎರಡು ಸಾವಿರ ನೂತನ ಸದಸ್ಯರನ್ನು ನೋಂದಾವಣಿ ಮಾಡುವ ಮೂಲಕ ಸದಸ್ಯರ ಸಂಖ್ಯೆಯನ್ನು ಆರು ಸಾವಿರಕ್ಕೆ ಏರಿಸಲು ನಿರ್ಧರಿಸಲಾಯಿತು.

ಮಡಿಕೇರಿ ನಗರದಲ್ಲಿ ಸಂಘಕ್ಕೆ ಸ್ವಂತ ಕಚೇರಿ ಇಲ್ಲದ ಕಾರಣ ಎರಡು ಎಕರೆ ಜಾಗವನ್ನು ಖರೀದಿಸಿ ಕಚೇರಿ ನಿರ್ಮಿಸುವದಕ್ಕಾಗಿ ಆರ್ಥಿಕ ಕ್ರೋಢೀರಣ ಮಾಡಲು ಆರ್ಥಿಕ ಸಮಿತಿಯನ್ನು ರಚಿಸಲಾಯಿತು.

ಕ್ರೀಡಾ ಮತ್ತು ಸಾಂಸ್ಕøತಿಕ ಸಮಿತಿಯನ್ನು ಕೂಡ ರಚಿಸಲಾಗಿದ್ದು, ಮುಂದಿನ ಸಾಲಿನಿಂದ ಹತ್ತನೇ ತರಗತಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಒಕ್ಕಲಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲು ಸಭೆ ನಿರ್ಧರಿಸಿತು.

ಆರ್ಥಿಕ ಸಮಿತಿಯ ನೇತೃತ್ವವನ್ನು ಡಿ.ಇ. ಶಿವಯ್ಯ, ವಿ.ಕೆ. ದೇವಲಿಂಗಯ್ಯ, ಎಸ್.ಟಿ. ಪೊನ್ನಪ್ಪ, ವಿ.ಪಿ. ಶಶಿಧರ್, ಕೆ.ಪಿ. ಚಂದ್ರಕಲಾ, ಪಿ.ಆರ್. ಪುರುಷೋತ್ತಮ, ಎ.ಪಿ. ನಾಗರಾಜು, ಕೆ.ಆರ್. ಸತೀಶ್, ಎಂ.ಪಿ. ಕೃಷ್ಣರಾಜು ಹಾಗೂ ಬಿ.ಡಿ. ಮಂಜುನಾಥ್ ವಹಿಸಲಿದ್ದಾರೆ ಎಂದು ಅಧ್ಯಕ್ಷ ಎಸ್.ಎಂ. ಚಂಗಪ್ಪ ತಿಳಿಸಿದ್ದಾರೆ.

ಸಭೆಯಲ್ಲಿ ಕೆ.ಕೆ. ಮಂಜುನಾಥ್ ಕುಮಾರ್, ಭರತ್ ಕುಮಾರ್, ಎಸ್.ಜಿ. ಮೇದಪ್ಪ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.