ಸೋಮವಾರಪೇಟೆ, ಆ. 10: ತಾಲೂಕು ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆಯ ವತಿಯಿಂದ ಸ್ಥಳೀಯ ಒಕ್ಕಲಿಗರ ಸಮುದಾಯ ಭವನದಲ್ಲಿ ಮಧುಬಾನ ಸೊಪ್ಪಿನ ಖಾದ್ಯಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಉತ್ತರ ಕೊಡಗಿನ ಗ್ರಾಮೀಣ ಭಾಗದಲ್ಲಿ ಮಧುಬಾನ ಸೊಪ್ಪು ಎಂದು ಜನಪ್ರಿಯವಾಗಿರುವ ಸೊಪ್ಪಿನಿಂದ ತಯಾರಿಸಿದ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಸ್ಪರ್ಧೆಗೆ ಇಡಲಾಗಿತ್ತು. ತಮ್ಮ ಮನೆಯಲ್ಲಿ ತಯಾರಿಸಿ ತಂದಿದ್ದ ಮಧುಬಾನ ಸೊಪ್ಪಿನ ಖಾದ್ಯಗಳ ಸ್ಪರ್ಧೆಯಲ್ಲಿ ಒಕ್ಕಲಿಗ ಮಹಿಳೆಯರು ಭಾಗವಹಿಸಿದ್ದರು. ಇತರರು ರುಚಿ ರುಚಿಯ ಖಾದ್ಯಗಳನ್ನು ಸವಿದರು.ಮಧುಬಾನ ಸೊಪ್ಪಿನಿಂದ ತಯಾರಿಸಿದ ಮದ್ದುಸೊಪ್ಪಿನ ಜೆಲ್ಲಿ, ಆಲೂಗೆಡ್ಡೆ ಹಲ್ವಾ, ಸೂಪ್ಲೆ, ಬರ್ಫಿ, ರವೆ ಹಲ್ವಾ, ಮಧುಬಾನ ಲಾಡು, ಸೊಪ್ಪಿನ ಕಾಯಿ ಬರ್ಫಿ, ಮಧುಬಾನ ಕಾಯಿ ಗಿಣ್ಣು, ಸೊಪ್ಪಿನ ಪಾಯಸ, ಪುಡ್ಡಿಂಗ್, ಬಾಳೆಹಣ್ಣು ಹಲ್ವಾ, ಪಡ್ಡು, ಜಾಮೂನು, ಗೋಡಂಬಿ ಹಲ್ವಾ ಸೇರಿದಂತೆ ತರಹೇವಾರಿ ಖಾದ್ಯಗಳು ನೋಡುಗರ ಬಾಯಲ್ಲಿ ನೀರು ತರಿಸಿದವು.

ಖಾದ್ಯಗಳ ಸ್ಪರ್ಧೆಯಲ್ಲಿ ಶ್ವೇತ ವಸಂತ ಪ್ರಥಮ ಸ್ಥಾನ ಪಡೆದರು. ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ಹಾಗೂ ನಯನ ಪುರುಷೋತ್ತಮ ದ್ವಿತೀಯ ಸ್ಥಾನ ಗಳಿಸಿದರು. ತೀರ್ಪುಗಾರರಾಗಿ ರೀಟಾ ಕುಶಾಲಪ್ಪ, ರಾಣಿ ಕುಶಾಲಪ್ಪ ಕಾರ್ಯನಿರ್ವಹಿಸಿದರು. ಮಧುಬನ ಸೊಪ್ಪಿನ ರಸದಿಂದ ವಿವಿಧ ಬಗೆಯ ತಿಂಡಿಗಳನ್ನು ತಯಾರಿಸುವ ಬಗ್ಗೆ ರತಿ ಮುತ್ತಣ್ಣ, ಪೂರ್ಣಿಮಾ ಗೋಪಾಲ್ ಮಾಹಿತಿ ನೀಡಿದರು.

ಪ್ರಗತಿಪರ ಮಹಿಳಾ ವೇದಿಕೆಯ ಸದಸ್ಯರಿಗೆ ವಿವಿಧ ಒಳಾಂಗಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವೇದಿಕೆಯ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕಾರ್ಯದರ್ಶಿ ಸಂಗೀತಾ ದಿನೇಶ್, ಉಪಾಧ್ಯಕ್ಷೆ ಚಂದ್ರಿಕಾ ಕುಮಾರ್, ಖಜಾಂಚಿ ಲಾವಣ್ಯ ಮೋಹನ್, ಶಾಲೆಯ ಕರೆಸ್ಪಾಂಡೆಂಟ್ ಕವಿತಾ ವಿರೂಪಾಕ್ಷ ಕಾರ್ಯಕ್ರಮ ನಡೆಸಿಕೊಟ್ಟರು.