ಸೋಮವಾರಪೇಟೆ, ಸೆ. 26: ಯಾವದೇ ಸಮಾಜಕ್ಕೆ ರಾಜಕೀಯ ಶಕ್ತಿ ಇಲ್ಲದಿದ್ದರೆ ಸಮಾಜದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಈ ಹಿನ್ನೆಲೆ ಜಿಲ್ಲೆಯ ವಿವಿಧೆಡೆ ಹರಿದು ಹಂಚಿ ಹೋಗಿರುವ ಒಕ್ಕಲಿಗ ಸಮುದಾಯ ದವರು ಒಂದುಗೂಡ ಬೇಕು ಎಂದು ಮಾಜೀ ಸಚಿವ ಬಿ.ಎ. ಜೀವಿಜಯ ಅಭಿಮತ ವ್ಯಕ್ತಪಡಿಸಿದರು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಒಕ್ಕಲಿಗ ಜನಾಂಗ ಸಾಮಾಜಿಕ ವಾಗಿ ಇನ್ನಷ್ಟು ಮುನ್ನೆಲೆಗೆ ಬರಬೇಕಿದೆ. ರಾಜಕೀಯ ಶಕ್ತಿ ಇಲ್ಲದಿದ್ದರೆ ಸಮಾಜದ ಬೆಳವಣಿಗೆ ನಿರೀಕ್ಷಿತ ಪ್ರಗತಿ ಸಾಧಿಸಲು ಕಷ್ಟಸಾಧ್ಯ. ಪ್ರಜಾಪ್ರಭುತ್ವದ ಹಿಡಿತ ಎಲ್ಲಾ ಸಮಾಜಗಳ ಮೇಲಿದ್ದು, ಈ ನಿಟ್ಟಿನಲ್ಲಿ ಒಕ್ಕಲಿಗರು ಐಎಎಸ್,ಎಪಿಎಸ್, ಐಎಫ್‍ಎಸ್ ನಂತಹ ಹುದ್ದೆಗಳಿಗೆ ಸೇರ್ಪಡೆ ಗೊಳ್ಳಬೇಕು. ರಾಜಕೀಯ ವಾಗಿಯೂ ಅಧಿಕಾರ ಹಿಡಿಯಬೇಕು ಎಂದು ಜೀವಿಜಯ ನುಡಿದರು.
ಸಂಘಟನೆಯ ಶಕ್ತಿ ಮತ್ತೊಂದು ಸಮಾಜದ ವಿರುದ್ಧ ಪೈಪೋಟಿ ನಡೆಸುವಂತಿರಬಾರದು ಎಂದು ಇದೇ ಸಂದರ್ಭ ಜೀವಿಜಯ ಕಿವಿಮಾತು ಹೇಳಿದರು. ಶಿಕ್ಷಣ ಕೇತ್ರದಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನದ ದಿ.ಬಾಲಗಂಗಾಧರನಾಥ ಸ್ವಾಮೀಜಿ ಯವರ ಕೊಡುಗೆ ಅಪಾರವಾದುದು. ಅವರ ಸೇವೆಯನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ ಮಾತನಾಡಿ, ಸಾಮಾಜಿಕ, ಔದ್ಯೋಗಿಕ, ಶೈಕ್ಷಣಿಕ ಮತ್ತು ಸಾಂಸ್ಕøತಿಕವಾಗಿ ಜನಾಂಗ ಬಲಗೊಳ್ಳಬೇಕು. ಯುವಜನಾಂಗಕ್ಕೆ ಉತ್ತಮ ಮಾರ್ಗದರ್ಶನ ನೀಡಿ, ಉತ್ತೇಜನಗೊಳಿಸುವ ನಿಟ್ಟಿನಲ್ಲಿ ಸಂಘವು ಕಾರ್ಯಪ್ರವೃತ್ತವಾಗಲಿದೆ. ಮಡಿಕೇರಿಯಲ್ಲಿ ರೂ. 1 ಕೋಟಿ ವೆಚ್ಚದಲ್ಲಿ ಒಕ್ಕಲಿಗರ ಸಂಘದ ಕಟ್ಟಡ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು.
ಸಂಘದ ವತಿಯಿಂದ ನೂತನ ವೆಬ್‍ಸೈಟ್ ತೆರೆಯಲಾಗಿದ್ದು, ಮುಂದಿನ ದಿನಗಳಲ್ಲಿ ಒಕ್ಕಲಿಗ ಮ್ಯಾಟ್ರಿಮನಿ, ಒಕ್ಕಲಿಗ ರಿಯಲ್ ಎಸ್ಟೇಟ್ ಸೇರಿದಂತೆ ಇನ್ನಿತರ ವ್ಯವಹಾರಗಳನ್ನು ಜನಾಂಗ ಬಾಂಧವರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗುವದು. ಕೊಡಗಿನಲ್ಲಿ ಒಕ್ಕಲಿಗರು 10ಸಾವಿರಕ್ಕೂ ಅಧಿಕ ಕುಟುಂಬಗಳಿದ್ದು, ರಾಜಕೀಯ ವಾಗಿ ಸದೃಢರಾಗಬೇಕು ಎಂದರು.
ಮತ್ತೋರ್ವ ಪ್ರಮುಖರಾದ ವಿ.ಪಿ. ಶಶಿಧರ್ ಮಾತನಾಡಿ, ಒಕ್ಕಲಿಗ ಜನಾಂಗದವರು ಸಾಮಾಜಿಕ ಪ್ರಾತಿನಿಧ್ಯದಿಂದ ವಂಚಿತರಾಗಿದ್ದೇವೆ. ರಾಜಕೀಯ ಪಕ್ಷಗಳೂ ಸಹ ಜನಾಂಗದ ಮೇಲೆ ಅಸಡ್ಡೆ ತೋರುತ್ತಿವೆ. ಇದು ಬದಲಾಗ ಬೇಕಾದರೆ ಒಕ್ಕಲಿಗರು ಆಲಸ್ಯ, ಅಸಡ್ಡೆಯಿಂದ ಹೊರಬರಬೇಕಿದೆ ಎಂದರು. ಸೋಮವಾರಪೇಟೆ ತಾಲೂಕು ಮಟ್ಟದಲ್ಲಿ ಒಕ್ಕಲಿಗ ಸಂಘ ಬಲಿಷ್ಟವಾಗಿದ್ದರೂ, ಜಿಲ್ಲಾ ಮಟ್ಟದಲ್ಲಿ ಸಂಘ ಬಲಿಷ್ಟವಾಗಿಲ್ಲ. ಒಕ್ಕಲಿಗ ಜನಾಂಗದವರನ್ನು ಎಲ್ಲಾ ರಾಜಕೀಯ ಪಕ್ಷಗಳು ಗುರುತಿಸಬೇಕು. ಆ ನಿಟ್ಟಿನಲ್ಲಿ ಸಂಘಟನೆಯನ್ನು ಜಿಲ್ಲಾ ಮಟ್ಟದಲ್ಲಿ ಬಲಿಷ್ಟಗೊಳಿಸಬೇಕಾಗಿದೆ. ರಾಜಕೀಯ ಪ್ರಭುತ್ವ ಸಾಧಿಸಬೇಕಾಗಿದೆ ಎಂದರು.
ಮಡಿಕೇರಿ ತಾಲೂಕು ಅಧ್ಯಕ್ಷ ಕೃಷ್ಣರಾಜು ಮಾತನಾಡಿ, ನಾಡಪ್ರಭು ಕೆಂಪೇಗೌಡ ಅವರ ದಿನಾಚರಣೆ ಯನ್ನು ಸರ್ಕಾರದ ವತಿಯಿಂದ ಆಚರಿಸುವಂತಾಗಬೇಕು. ಈ ಬಗ್ಗೆ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು ಎಂದರು.
ವೇದಿಕೆಯಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಜಿಲ್ಲಾ ಸಂಘದ ಗೌರವ ಕಾರ್ಯದರ್ಶಿ ಎಂ.ಆರ್. ಗೋಪಿನಾಥ್, ಒಕ್ಕಲಿಗರ ಸಂಘದ ವಿರಾಜಪೇಟೆ ತಾಲೂಕು ಅಧ್ಯಕ್ಷ ದೇವಲಿಂಗಯ್ಯ, ಜನಾಂಗದ ಪ್ರಮುಖರಾದ ಕೆ.ಪಿ. ಚಂದ್ರಕಲಾ, ಕೆ.ಎಂ. ಲೋಕೇಶ್, ಲೋಕೇಶ್ವರಿ ಗೋಪಾಲ್, ಬಿ.ಜೆ. ದೀಪಕ್, ನಂದಕುಮಾರ್, ಕೆ.ಕೆ.ಮಂಜುನಾಥ್ ಕುಮಾರ್, ಅರೆಯೂರು ಪಾಪಯ್ಯ, ತಾಕೇರಿ ಪೊನ್ನಪ್ಪ ಸೇರಿದಂತೆ ಇತರ ಪ್ರಮುಖರು ಇದ್ದರು.