ಸೋಮವಾರಪೇಟೆ,ಆ.14: ತಾಲೂಕಿನ ನಿಡ್ತ ಮೀಸಲು ಅರಣ್ಯ ವ್ಯಾಪ್ತಿಯಲ್ಲಿರುವ ಶನಿವಾರಸಂತೆ-ಕುಶಾಲನಗರ ಮುಖ್ಯ ರಸ್ತೆಯ ಬಾಣಾವರ ಸಮೀಪದ ಸಂಗಯ್ಯನಪುರದಲ್ಲಿ ಒಂಟಿ ಸಲಗದ ಧಾಳಿಗೆ ವ್ಯಕ್ತಿಯೋರ್ವ ಮೃತನಾಗಿದ್ದು, ಘಟನೆಯಿಂದ ಉದ್ರಿಕ್ತರಾದ ಸ್ಥಳೀಯರು ಹೆದ್ದಾರಿಗೆ ತಡೆಯೊಡ್ಡಿ ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ನಡೆಯಿತು.

ಬೈಕ್‍ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಹೆದ್ದಾರಿಯಲ್ಲೇ ಅಡ್ಡಗಟ್ಟಿರುವ ಒಂಟಿ ಸಲಗ ಮನಸೋಯಿಚ್ಛೆ ಧಾಳಿ ನಡೆಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಡ ಹಗಲೇ ನಡೆದಿರುವ ಧಾಳಿಯಿಂದ ಜನತೆಯ ಆಕ್ರೋಶದ ಕಟ್ಟೆಯೂ ಒಡೆದಿದ್ದು, ಅರಣ್ಯ ಇಲಾಖೆಯವರನ್ನು ಕಟುಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿದ್ದಾರೆ. ಕೊಡ್ಲಿಪೇಟೆ ಬೆಸೂರು ಗ್ರಾಮ ನಿವಾಸಿ, ಮರಗೆಲಸ ಮಾಡುತ್ತಿದ್ದ ಹೆಚ್.ಎನ್. ರಾಜಾಚಾರ್ (45 ವರ್ಷ)

ಎಂಬವರೇ ಕಾಡಾನೆ ಧಾಳಿಗೆ ಸಿಲುಕಿ ಸಾವನ್ನಪ್ಪಿದವರಾಗಿದ್ದು, ಬೆಸೂರಿನಿಂದ ತನ್ನ ಬೈಕ್‍ನಲ್ಲಿ ಕುಶಾಲನಗರಕ್ಕೆ ತಮ್ಮ ಸಂಬಂಧಿಕರ ಮನೆಗೆ ತೆರಳುತ್ತಿದ್ದ ಸಂದರ್ಭ ಅಪರಾಹ್ನ 3.30ರ ಸುಮಾರಿಗೆ ದುರ್ಘಟನೆ ನಡೆದಿದೆ. ಶನಿವಾರಸಂತೆ-ಕುಶಾಲನಗರ ಹೆದ್ದಾರಿಯ ಮಾರ್ಗ ಮಧ್ಯೆ ಇರುವ ಸಂಗಯ್ಯನಪುರದ ಬಸ್ ನಿಲ್ದಾಣದ 150 ಮೀಟರ್ ಅಂತರದಲ್ಲಿ ಕಾಡಾನೆ ಧಾಳಿ ನಡೆಸಿದೆ.

ಮೊದಲು ಬೈಕ್‍ನ ಮೇಲೆ ಕಾಡಾನೆ ಧಾಳಿ ನಡೆಸಿದ ಪರಿಣಾಮ ರಾಜಾಚಾರ್ ಅವರು ಬೈಕ್ ಸಹಿತ ರಸ್ತೆಯ ಬದಿಯಿದ್ದ ಚರಂಡಿಗೆ ಬಿದ್ದಿದ್ದಾರೆ. ಈ ಸಂದರ್ಭ ಬೈಕ್‍ನ್ನು ಜಖಂಗೊಳಿಸಿದ ಒಂಟಿ ಸಲಗ ರಾಜಾಚಾರ್ ಅವರನ್ನು ಸೊಂಡಿಲಿ ನಿಂದ ಎತ್ತಿ ಮನ ಸೋಯಿಚ್ಛೆ ಎಸೆದಿದ್ದು, ದಂತದಿಂದಲೂ ತಿವಿದಿದೆ. ಪರಿಣಾಮ ರಾಜಾಚಾರ್ ಅವರ ಶರೀರದ ಒಳಭಾಗಗಳು ಹೊರ ಬಂದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಘಟನೆಯಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಾಣಾವರ, ಸಂಗಯ್ಯನಪುರ ಸುತ್ತಮುತ್ತಲಿನ ಗ್ರಾಮಸ್ಥರು ಕುಶಾಲನಗರ-ಶನಿವಾರ ಸಂತೆ ಹೆದ್ದಾರಿ ತಡೆದು ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಸಿಟ್ಟನ್ನು ಹೊರಹಾಕಿದರು. ಈ ಭಾಗದಲ್ಲಿ ಕಾಡಾನೆ ಧಾಳಿ ನಿರಂತರವಾಗಿದ್ದು, ಇದಕ್ಕೆ ಕಡಿವಾಣ ಹಾಕುವಲ್ಲಿ ಇಲಾಖೆ ವಿಫಲವಾಗಿದೆ. ಈ ಭಾಗದಲ್ಲಿ ಸಂಚರಿಸುತ್ತಿರುವ ಆನೆಗಳನ್ನು ತಕ್ಷಣ ಸ್ಥಳಾಂತರಿಸಬೇಕು. ಅರಣ್ಯದ ಸುತ್ತಲೂ ಸೋಲಾರ್ ಫೆನ್ಸಿಂಗ್, ಆನೆ ಕಂದಕ ನಿರ್ಮಿಸುವ ಮೂಲಕ ಜನರ ಜೀವ ಉಳಿಸುವ ಕಾರ್ಯ ಮಾಡಬೇಕು ಎಂದು ಪ್ರತಿಭಟನೆಯಲ್ಲಿದ್ದ ಪ್ರಮುಖರಾದ ಮಧು ಶಂಕರ್ ಆಗ್ರಹಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳ ವಿರುದ್ಧ ಕಟುಶಬ್ದಗಳನ್ನು ಬಳಸಿದ ಪ್ರತಿಭಟನಾಕಾರರು, ಮಾನವರ ಪ್ರಾಣವನ್ನು ಬಲಿತೆಗೆದುಕೊಳ್ಳುತ್ತಿರುವ ಆನೆಗಳನ್ನು ನೀವುಗಳಾಗೇ ಓಡಿಸುತ್ತೀರೋ ಅಥವಾ ನಾವುಗಳೇ ಗುಂಡು ಹೊಡೆಯಬೇಕೋ? ಎಂದು ಸಿಟ್ಟಿನಿಂದ ಪ್ರಶ್ನಿಸಿದರು. ಮಾನವರ ಪ್ರಾಣ ಹಾನಿಗೆ ಸರ್ಕಾರದಿಂದ ಸಿಗುವ 5 ಲಕ್ಷ ಪರಿಹಾರ ಬೇಡ. ಒಂದು ಜೀವಕ್ಕೆ ಕೇವಲ 5 ಲಕ್ಷ ಬೆಲೆಯಾ? ಬೇಕಾದ್ರೆ ಅರಣ್ಯ ಇಲಾಖೆಯವರೇ ಕಾಡಾನೆ ಧಾಳಿಗೆ ಒಳಗಾಗಲಿ. ನಾವುಗಳೇ 5 ಲಕ್ಷ ಕೊಡ್ತೀವಿ. ನೀವುಗಳು ಸಿದ್ದರಿದ್ದೀರಾ? ಎಂದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ಮೊದಲು ಅರಣ್ಯದ ಸುತ್ತಲೂ ಸೋಲಾರ್ ಬೇಲಿ ಅಳವಡಿಸಿ, ಆನೆ ಕಂದಕ ನಿರ್ಮಿಸಿ. ಅರಣ್ಯದ ಅಂಚಿನಲ್ಲಿರುವ ಕಾಡುಗಳನ್ನು ಕಡಿದು ತೆರವುಗೊಳಿಸಿ ಎಂದು ಒಕ್ಕೊರಲಿನಿಂದ ಆಗ್ರಹಿಸಿ ದರು. ಈ ಸಂದರ್ಭ ಪ್ರತಿಕ್ರಿಯಿಸಿದ ವಲಯ ಅರಣ್ಯಾಧಿಕಾರಿ ಮೊಹಿಸೀನ್ ಬಾಷ, ಮೃತರ ಕುಟುಂಬಕ್ಕೆ ಸರ್ಕಾರ 5 ಲಕ್ಷ ಪರಿಹಾರ ನೀಡಲಿದೆ. ತಕ್ಷಣವೇ 2 ಲಕ್ಷದ ಚೆಕ್ ನೀಡುತ್ತೇವೆ. ಸದ್ಯ ಹುದುಗೂರು, ಐಗೂರು ಹಾಗೂ ಕಣಿವೆಯಲ್ಲಿ ಆನೆ ಕಂದಕ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅದು ಮುಗಿದ ತಕ್ಷಣ ಬಾಣಾವರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವದು. ತಕ್ಷಣಕ್ಕೆ ಅರಣ್ಯದ ಅಂಚಿನಲ್ಲಿರುವ ರಸ್ತೆ ಬದಿಯ ಕಾಡುಗಳನ್ನು ತೆರವುಗೊಳಿಸ ಲಾಗುವದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆ ಯಲಾಯಿತು.

ಹೆದ್ದಾರಿ ತಡೆಯಿಂದಾಗಿ ನೂರಾರು ವಾಹನಗಳು ರಸ್ತೆಯಲ್ಲಿ ನಿಂತವು. ಕೆಲಸಕ್ಕೆ ತೆರಳಿದ್ದ ವಾಹನಗಳೂ ಸೇರಿದಂತೆ ಈ ಭಾಗದಲ್ಲಿ ಸಂಚರಿಸುವ ಬಸ್‍ಗಳು ಸ್ಥಗಿತಗೊಂಡ ಪರಿಣಾಮ ಪ್ರಯಾಣಿಕರು ಪರದಾಟ ಅನುಭವಿಸಿದರು. ಘಟನೆ ನಡೆದ ಸ್ಥಳಕ್ಕೆ ನೂರಾರು ಮಂದಿ ಭೇಟಿ ನೀಡಿ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದುದು ಕಂಡುಬಂತು. ಹೆದ್ದಾರಿಯಲ್ಲೇ ಹೀಗಾದರೆ ಮುಂದೇನು? ಎಂದು ಹಲವರು ಪ್ರಶ್ನಿಸುತ್ತಿದ್ದರು. ದಿಢೀರ್ ಪ್ರತಿಭಟನೆ ಯಿಂದಾಗಿ ನೂರಾರು ವಾಹನಗಳು ರಸ್ತೆಯಲ್ಲಿಯೇ ನಿಲುಗಡೆಗೊಂಡಿದ್ದವು. 3.30ಕ್ಕೆ ಪ್ರಾರಂಭವಾದ ಪ್ರತಿಭಟನೆ 6 ಗಂಟೆಯವರೆಗೂ ನಡೆಯಿತು. ಅರಣ್ಯಾಧಿಕಾರಿಯ ಭರವಸೆಯ ನಂತರ ಮೃತದೇಹವನ್ನು ಸೋಮವಾರಪೇಟೆಯ ಶವಾಗಾರಕ್ಕೆ ಸಾಗಿಸಲಾಯಿತು. ಮೃತ ರಾಜಾಚಾರ್ ಅವರು ಪತ್ನಿ ಮಂಜುಳಾ ಸೇರಿದಂತೆ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಲಾಲ್ ಸಾಬ್, ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಅರಣ್ಯ ಇಲಾಖಾ ಸಿಬ್ಬಂದಿಗಳು, ಪೊಲೀಸ್ ಇಲಾಖಾ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದರು. ಐಎನ್‍ಟಿಯುಸಿ ರಾಜ್ಯ ಅಧ್ಯಕ್ಷ ನಾಪಂಡ ಮುದ್ದಪ್ಪ, ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಸೇರಿದಂತೆ ಇತರ ಪ್ರಮುಖರು ಸ್ಥಳಕ್ಕೆ ತೆರಳಿ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಗ್ರಾ.ಪಂ. ಸದಸ್ಯರಾದ ಶಶಿಕುಮಾರ್, ಮಂಜುನಾಥ್, ಪ್ರಮುಖರಾದ ಶಿವದಾಸ್, ಮಧುಶಂಕರ್, ಬಂಗಾರಿ, ಮೋಹನ್‍ದಾಸ್, ನೇರುಗಳಲೆ ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

-ವಿಜಯ್ ಹಾನಗಲ್