ಸಿದ್ದಾಪುರ, ಸೆ. 6: ಗಣೇಶ ಚತುರ್ಥಿ ದಿನದಂದು ಹಾಡ ಹಗಲಲ್ಲೇ ಒಂಟಿ ಸಲಗವೊಂದು ಬೈಕ್ ಸವಾರನ ಮೇಲೆ ಧಾಳಿ ನಡೆಸಿ ಹತ್ಯೆಗೈದಿರುವ ದಾರುಣ ಘಟನೆ ಸಿದ್ದಾಪುರ ಸಮೀಪದ ಪಾಲಿಬೆಟ್ಟ ರಸ್ತೆಯ ವಡ್ಡರಳ್ಳಿ ತಿರುವಿನ ಬಳಿ ಸೋಮವಾರದಂದು ನಡೆದಿದೆ.ಮೂಲತಃ ಕೂಡ್ಲೂರು ಚೆಟ್ಟಳ್ಳಿ ನಿವಾಸಿ, ಕಾನನಕಾಡುವಿನಲ್ಲಿ ಟೈಲರ್ ವೃತ್ತಿ ಮಾಡಿಕೊಂಡಿದ್ದ ಮದಲೈ ಮುತ್ತು ಎಂಬವರ ಪುತ್ರ ಅರುಳ್ ಜೋಸೆಫ್ ಅಲಿಯಾಸ್ ಮಣಿ (39) ಎಂಬವರು ಸೋಮವಾರ ಬೆಳಿಗ್ಗೆ ತನ್ನ ಮನೆಯಿಂದ ಪಾಲಿಬೆಟ್ಟದ ತನ್ನ ಸಹೋದರಿಯ ಮನೆಗೆ ತೆರಳುವ ಸಂದರ್ಭ ಸಿದ್ದಾಪುರದ ವಡ್ಡರಳ್ಳಿ ತಿರುವಿನಲ್ಲಿ ಒಂಟಿ ಸಲಗವೊಂದು ದಿಢೀರನೆ ರಸ್ತೆಗಿಳಿದಿದೆ ಎನ್ನಲಾಗಿದೆ. ಕೂಡಲೇ ಬೈಕ್ನಿಂದ ಇಳಿಯಲು ಪ್ರಯತ್ನಿಸಿದ ಸಂದರ್ಭ ಕಾಡಾನೆಯು ಸೊಂಡಿಲಿನಿಂದ ಎತ್ತಿ ಎಳೆದೊಯ್ದಿದ್ದು, ಅವರ ಎದೆ ಹಾಗೂ ಬಲ ಕಾಲಿಗೆ ತುಳಿದಿದೆ. ಪರಿಣಾಮ ಗಂಭೀರ ಸ್ವರೂಪದ ಗಾಯವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತೋಟ ಕೆಲಸಕ್ಕೆ ತೆರಳುತ್ತಿದ್ದ ವಡ್ಡರಳ್ಳಿ ತೋಟ ಕಾರ್ಮಿಕ ರಾಜೇಶ್ ಕೂಡಲೇ ಸಿದ್ದಾಪುರ ಸಮುದಾಯ ಆರೋಗ್ಯಕ್ಕೆ ದಾಖಲಿಸಿದ್ದರೂ, ಅಷ್ಟರಲ್ಲಿಯೇ ಅರುಳ್ ಜೋಸೆಫ್ನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಬಿ.ಜಿ. ಕುಮಾರ್ ಸ್ಥಳ ಮಹಜರು ನಡೆಸಿದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.(ಮೊದಲ ಪುಟದಿಂದ)
ರೊಚ್ಚಿಗೆದ್ದ ಗ್ರಾಮಸ್ಥರು
ಕಾಡಾನೆ ಧಾಳಿಗೆ ಸಿಲುಕಿ ಅರುಳ್ ಜೋಸೆಫ್ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಚೆಟ್ಟಳ್ಳಿ ಸೇರಿದಂತೆ ಸಿದ್ದಾಪುರದ ನೂರಾರು ಮಂದಿ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿದರು. ಸಿದ್ದಾಪುರ ಹಾಗೂ ಸುತ್ತಮುತ್ತಲ ವಿವಿಧ ಪಕ್ಷ ಮುಖಂಡರು ರಾಜಕೀಯ ಮರೆತು ಹೋರಾಟಕ್ಕೆ ಮುಂದಾದರು. ಬಳಿಕ ಶವಾಗಾರದ ಮುಂಭಾಗದಲ್ಲಿ ನೂರಾರು ಮಂದಿ ಸಾರ್ವಜನಿಕರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸ ಬೇಕೆಂದು ಪಟ್ಟು ಹಿಡಿದರು. ಈ ಸಂದರ್ಭ ಅರಣ್ಯ ಇಲಾಖೆ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಆಹೋರಾತ್ರಿ ಧರಣಿ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದರು. ಬಳಿಕ ಮಡಿಕೇರಿ ತಾಲೂಕು ಡಿ.ಎಫ್.ಓ. ಎಂ.ಎಂ ಜಯ ಸ್ಥಳಕ್ಕಾಗಮಿಸಿ, ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಈ ಸಂದರ್ಭ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಮನುಷ್ಯನ ಜೀವಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಎಲ್ಲಾ ಪಕ್ಷ ಮುಖಂಡರು ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಮಡಿಕೇರಿ ತಾಲೂಕು ಡಿ.ಎಫ್.ಓ. ಎಂ.ಎಂ. ಜಯ, ಪುಂಡಾನೆಗಳನ್ನು ಹಿಡಿಯಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದೀಗ 4 ಪುಂಡಾನೆಗಳನ್ನು ಸೆರೆ ಹಿಡಿಯಲು ಆದೇಶ ನೀಡಲಾಗಿದೆ. ಒಂದು ವಾರಗಳಲ್ಲಿ ಪುಂಡಾನೆಗಳನ್ನು ಹಿಡಿಯಲಾಗುವದು ಹಾಗೂ ಕಾಡಾನೆ ಉಪಟಳಕ್ಕೆ ಶಾಶ್ವತ ಪರಿಹಾರ ಒದಗಿಸುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವದು ಎಂದರು.
ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಮುಂದಿನ 15 ದಿನಗಳೊಳಗೆ ಅರಣ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಿ ವೈಜ್ಞಾನಿಕವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಕಾನೂನು ಹೋರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು. ನಿದ್ರಾವಸ್ಥೆಯಲ್ಲಿರುವ ಸಚಿವರು ಕೂಡಲೇ ಜಿಲ್ಲೆಗೆ ಭೇಟಿ ನೀಡಬೇಕೆಂದು ಒತ್ತಾಯಿಸಿದರು.
ಜಿ.ಪಂ. ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಮಾತನಾಡಿ, ಅಮ್ಮತ್ತಿ, ಸಿದ್ದಾಪುರ, ಪಾಲಿಬೆಟ್ಟ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ 50 ಕ್ಕೂ ಹೆಚ್ಚು ಕಾಡಾನೆಗಳನ್ನು ಕಾಡಿಗಟ್ಟಬೇಕು. ಇಲ್ಲವಾದಲ್ಲಿ ಕಾಡಾನೆಗಳಿಗೆ ಗುಂಡು ಹಾರಿಸಲು ಅನುಮತಿ ನೀಡಲಿ, ಕಾರ್ಮಿಕರಿಗೆ ಸರಕಾರ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು. ಕಾಡಾನೆ ಧಾಳಿಯಿಂದ ಮೃತಪಟ್ಟವರಿಗೆ ರೂ. 5 ಲಕ್ಷ ನೀಡಿ ಕೈತೊಳೆದುಕೊಳ್ಳುತ್ತಿದೆ ಎಂದು ಟೀಕಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಸಲಾಂ ಮಾತನಾಡಿ, ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿ, ಸರ್ವ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಶಾಶ್ವತ ಯೋಜನೆಯನ್ನು ರೂಪಿಸುವದರೊಂದಿಗೆ ಸಚಿವರ ಗಮನಕ್ಕೆ ತಂದು ಜನಸಾಮಾನ್ಯರಿಗೆ ರಕ್ಷಣೆ ಒದಗಿಸಬೇಕೆಂದರು.
ಕಾಂಗ್ರೆಸ್ ಮುಖಂಡ ಪಿ.ಸಿ. ಹಸೈನಾರ್ ಹಾಜಿ ಮಾತನಾಡಿ, ಕಾಡಾನೆ ಹಾವಳಿ ಮಿತಿಮೀರಿದ್ದು, ಕೇವಲ 4 ಕಾಡಾನೆ ಹಿಡಿದರೆ ಸಮಸ್ಯೆ ಬಗೆಹರಿಯುವದಿಲ್ಲ. ಈ ಬಗ್ಗೆ ಶಾಶ್ವತ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು. ಇಲಾಖೆಯು ನಿರ್ಮಿಸಿರುವ ಕಂದಕಗಳ ಗುಣಮಟ್ಟ ಕಳಪೆಯಿಂದ ಕೂಡಿದ್ದು, ಕಾಡಾನೆಗಳು ರಾಜಾರೋಷದಿಂದ ಸುತ್ತಾಡುತ್ತಿವೆ. ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಮುಖ್ಯಮಂತ್ರಿಯ ಬಳಿ ನಿಯೋಗ ತೆರಳುವದಾಗಿ ತಿಳಿಸಿದರು.
ಈ ಸಂದರ್ಭ ಜಿ.ಪಂ. ಸದಸ್ಯೆ ಸುನಿತಾ, ತಾ.ಪಂ. ಸದಸ್ಯರಾದ ಅಜಿತ್ ಕರುಂಬಯ್ಯ, ಬಲ್ಲಾರಂಡ ಮಣಿ ಉತ್ತಪ್ಪ, ಗ್ರಾ.ಪಂ. ಸದಸ್ಯರಾದ ರೆಜಿತ್ ಕುಮಾರ್, ಜಾಫರ್, ಹುಸೈನ್, ಕಾರ್ಮಿಕ ಮುಖಂಡ ಎನ್.ಡಿ. ಕುಟ್ಟಪ್ಪ, ಡಿ.ವೈ.ಎಫ್.ಐ. ಅನಿಲ್, ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ವಿ.ಕೆ. ಲೊಕೇಶ್, ಸ್ಥಾನೀಯ ಸಮಿತಿ ಅಧ್ಯಕ್ಷ ಮನೋಹರ್, ಕಾಂಗ್ರೆಸ್ ಮುಖಂಡ ಬಷೀರ್, ಮೂಸ, ಗ್ರಾಮಸ್ಥರಾದ ಡೆನ್ನಿ, ಮೋಹನ್ ಕುಮಾರ್ ಇನ್ನಿತರರು ಇದ್ದರು. ಠಾಣಾಧಿಕಾರಿ ಬಿ.ಜಿ. ಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಆರ್.ಎಫ್.ಓ. ಗೋಪಾಲ ಹಾಗೂ ದೇವಯ್ಯ ಹಾಜರಿದ್ದು, ಮೃತರ ಕುಟುಂಬಕ್ಕೆ ತುರ್ತಾಗಿ ರೂ. 2 ಲಕ್ಷ ಚೆಕ್ ವಿತರಿಸಿದರು. ಕುಟುಂಬಸ್ಥರು ಚೆಕ್ ಪಡೆಯಲು ನಿರಾಕರಿಸಿ, ಬಳಿಕ ಅವರ ಮನೊವೊಲಿಸಿ ಚೆಕ್ ನೀಡಲಾಯಿತು. ಕಳೆದ ಒಂದು ವಾರದ ಹಿಂದೆಯಷ್ಟೇ ಅವರೆಗುಂದ ದಲ್ಲಿ ಕಾಡಾನೆ ಧಾಳಿಗೆ ಕಾರ್ಮಿಕ ನೋರ್ವ ಬಲಿಯಾಗಿದ್ದು, ಘಟನೆ ಮಾಸುವ ಮುನ್ನ ಮತ್ತೊಂದು ಘಟನೆ ನಡೆದಿರುವದು ಗ್ರಾಮಸ್ಥರಲ್ಲಿ ಭಯಕ್ಕೆ ಕಾರಣವಾಗಿದೆ.
- ವಾಸು ಆಚಾರ್ಯ