ಸಿದ್ದಾಪುರ, ಆ. 28: ಹಾಡುಹಗಲೇ ಒಂಟಿ ಸಲಗವೊಂದು ಧಾಳಿ ನಡೆಸಿದ ಪರಿಣಾಮ ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿದ ದಾರುಣ ಘಟನೆ ಮಾಲ್ದಾರೆಯ ಸಮೀಪದ ಬಸವನಳ್ಳಿಯಲ್ಲಿ ಇಂದು ನಡೆದಿದೆ.
ಬಸವನಳ್ಳಿಯ ನಿವಾಸಿ ಚಾತ ಎಂಬವರ ಪುತ್ರ ಚೆಲುವ (35) ಎಂಬಾತನು ಬಸವನಳ್ಳಿಯಿಂದ ಮಾಲ್ದಾರೆಯ ಮುಖಾಂತರ ಸಿದ್ದಾಪುರದ ಸಂತೆಗೆಂದು ತನ್ನ ನೆರೆಮನೆಯ ನಿವಾಸಿಗಳಾದ ಮಾದ ಹಾಗೂ ಪಾಪುವಿನೊಂದಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಒಂಟಿ ಸಲಗವೊಂದು ದಿಢೀರನೇ ಧಾಳಿ ನಡೆಸಿದ್ದು, ಮಾದ ಹಾಗೂ ಪಾಪು ಹೆದರಿ ಭಯದಿಂದ ಓಡಿ ಹೋದರು. ಚೆಲುವ ಎಂಬಾತನನ್ನು ಕಾಡಾನೆ ಸೊಂಡಿಲಿನಿಂದ ಎತ್ತಿ ಬಿಸಾಡಿದ ಪರಿಣಾಮ ಕೈ ಹಾಗೂ ಎದೆಗೆ ತೀವ್ರ ಸ್ವರೂಪದ ಗಾಯ ಉಂಟಾಗಿತ್ತು. ಕೂಡಲೇ ಚೆಲುವನನ್ನು ಸಿದ್ದಾಪುರ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಮೃತಪಟ್ಟ ಪಂಜರಿಯರವರ ಚೆಲುವ ಅವರು ಅವಿವಾಹಿತರಾಗಿದ್ದು, ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯಾಧಿಕಾರಿ ದಯಾನಂದ, ಠಾಣಾಧಿಕಾರಿ ಬಿ.ಜಿ. ಕುಮಾರ್ ಭೇಟಿ ನೀಡಿ ತುರ್ತು ಪರಿಹಾರವನ್ನು ಮೃತರ ಕುಟುಂಬಕ್ಕೆ ನೀಡಿದ್ದಾರೆ. ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದೆ.
ಸಾಂತ್ವನ: ಕಾಡಾನೆ ಧಾಳಿಗೆ ಸಿಲುಕಿ ಮೃತಪಟ್ಟ ಕುಟುಂಬದವರಿಗೆ ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚ ಸಾಂತ್ವನ ಹೇಳಿದ್ದು, ಕೂಡಲೇ ತೋಟ ದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕು ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ಧನ ಕೂಡಲೇ ನೀಡಬೇಕೆಂದು ಅರಣ್ಯ ಇಲಾಖೆ ಯನ್ನು ಒತ್ತಾಯಿಸಿದ್ದಾರೆ. ಈ ಭಾಗದ ಕಾಡಾನೆಗಳ ಹಾವಳಿ ಬಗ್ಗೆ ಅರಣ್ಯ ಸಚಿವರ ಗಮನಕ್ಕೆ ತರುವದಾಗಿ ಸರಿತಾ ತಿಳಿಸಿದ್ದಾರೆ. -ಎ.ಎನ್. ವಾಸು