ನವದೆಹಲಿ, ಜ. 4: ಉತ್ತರ ಪ್ರದೇಶ, ಪಂಜಾಬ್, ಗೋವಾ ಸೇರಿ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ವೇಳಾ ಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಗೊಳಿಸಿದೆ.ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಚುನಾವಣಾ ಆಯುಕ್ತ ನಸೀಮ್ ಜೈದಿ ಅವರು ಪಂಚ ರಾಜ್ಯಗಳ ಚುನಾವಣಾ ದಿನಾಂಕಗಳನ್ನು ವಿವರಿಸಿದ್ದಾರೆ.

ಅದರಂತೆ ಗೋವಾ ಮತ್ತು ಪಂಜಾಬ್ ನಲ್ಲಿ ಒಂದೇ ಹಂತದಲ್ಲಿ ಫೆಬ್ರವರಿ 4 ರಂದು ಚುನಾವಣೆ ನಡೆಯಲಿದ್ದು, ಗೋವಾದ ಒಟ್ಟು 40 ವಿಧಾನಸಭಾ ಕ್ಷೇತ್ರ ಹಾಗೂ ಪಂಜಾಬ್ ನ ಒಟ್ಟು 117 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಉತ್ತರಾಖಂಡ ರಾಜ್ಯದ ಒಟ್ಟು 117 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 15ರಂದು ಒಂದೇ ಹಂತದಲ್ಲಿ ಮತ ದಾನ ನಡೆಯಲಿದ್ದು, ಮಣಿಪುರದಲ್ಲಿ ಮಾರ್ಚ್ 4 ಮತ್ತು ಮಾರ್ಚ್ 8 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಣಿಪುರದಲ್ಲಿ

(ಮೊದಲ ಪುಟದಿಂದ) ಒಟ್ಟು 60 ವಿಧಾನಸಭಾ ಕ್ಷೇತ್ರಗಳಿವೆ.

ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಫೆಬ್ರವರಿ 11, ಫೆಬ್ರವರಿ 15, ಫೆಬ್ರವರಿ 19, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 4 ಮತ್ತು ಮಾರ್ಚ್ 8 ಮತದಾನ ನಡೆಯಲಿದೆ. ಇನ್ನು ಚುನಾವಣಾ ಆಯೋಗ ಘೋಷಣೆ ಮಾಡಿರುವಂತೆ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ತಿಳಿದುಬಂದಿದೆ.

ಐದೂ ರಾಜ್ಯಗಳಲ್ಲಿ ಒಟ್ಟು 16 ಕೋಟಿ ಮತದಾರರಿದ್ದು, ಒಟ್ಟು 690 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಐದೂ ರಾಜ್ಯಗಳಲ್ಲಿ ಒಟ್ಟು 1 ಲಕ್ಷ 85 ಸಾವಿರ ಮತಗಟ್ಟೆಗಳ ಸ್ಥಾಪನೆ ಮಾಡುವದಾಗಿ ಆಯೋಗ ಹೇಳಿದ್ದು, ಇದೇ ಮೊದಲ ಬಾರಿಗೆ ಮಹಿಳೆಯರಿಗಾಗಿ ಪ್ರತ್ಯೇಕ ಮತಗಟ್ಟೆಗಳನ್ನು ಸ್ಥಾಪಿಸುವದಾಗಿ ಹೇಳಿದೆ. ಅಂತೆಯೇ ಮತದಾರರ ಪಟ್ಟಿಯಲ್ಲಿನ ಗೊಂದಲ ನಿವಾರಣೆಗಾಗಿ ಆಯೋಗ ಮುಂದಾಗಿದ್ದು, ಕಲರ್ ಫೋಟೋ ಸಹಿತ ಮತದಾರರ ಪಟ್ಟಿ ವಿತರಣೆ ಮಾಡಲು ಕ್ರಮ ಕೈಗೊಂಡಿದೆ. ಇನ್ನು ಮತದಾನದ ಗೌಪ್ಯತೆ ಕಾಪಾಡಲು ಮತಗಟ್ಟೆಯ ಎತ್ತರವನ್ನು 30 ಇಂಚುಗಳವರೆಗೆ ಏರಿಕೆ ಮಾಡಲು ಆಯೋಗ ನಿರ್ಧರಿಸಿದೆ.

ಆಯೋಗ ಹೇಳಿರುವಂತೆ ಈಗಾಗಲೇ ಶೇ.100ರಷ್ಟು ಮತದಾರರಿಗೆ ಮತದಾನದ ಗುರುತಿನ ಚೀಟಿ ವಿತರಣೆ ಮಾಡಲಾಗಿದ್ದು, ಪ್ರತೀ ಮತಗಟ್ಟೆಯಲ್ಲೂ ನಾಲ್ಕು ಕಡೆಗಳಲ್ಲಿ ಮತದಾನದ ವೇಳೆ ನಿರ್ವಹಿಸಬೇಕಾದ ನಿಯಮಗಳನ್ನು ಪೋಸ್ಟರ್ ಮೂಲಕ ಅಂಟಿಸಲಾಗುತ್ತದೆ.

ಮಾರ್ಚ್ 11 ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ. ಎಲ್ಲಾ ಐದು ರಾಜ್ಯಗಳಲ್ಲೂ ಮತಯಂತ್ರದಲ್ಲಿ ಓಔಖಿಂ (ನೋಟಾ) ಬಟನ್/ಚಿನ್ಹೆ ಇರುತ್ತದೆ.

ಅಭ್ಯರ್ಥಿಗಳ ಆಯ್ಕೆ ಸುಲಭಗೊಳಿಸಲು ಒಂದೇ ಚಿನ್ಹೆ, ಹೆಸರು ಗೊಂದಲ ನಿವಾರಣೆಗಾಗಿ ಅಭ್ಯರ್ಥಿಗಳ ಭಾವಚಿತ್ರವನ್ನು ಮತಯಂತ್ರದಲ್ಲಿ ಮುದ್ರಿಸಲಾಗುತ್ತದೆ.

ಖರ್ಚು ವೆಚ್ಚ ಮಿತಿ

ಉತ್ತರಪ್ರದೇಶ, ಪಂಜಾಬ್ ಹಾಗೂ ಉತ್ತರಾಖಂಡ್ ನ ಅಭ್ಯರ್ಥಿಗಳಿಗೆ 28 ಲಕ್ಷ ರೂ. ಹಾಗೂ ಗೋವಾ ಮತ್ತು ಮಣಿಪುರದ ಅಭ್ಯರ್ಥಿಗಳಿಗೆ 20 ಲಕ್ಷ ರೂ. ಮಿತಿಗೊಳಿಸಲಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಫೋಟೋ ಸಹಿತ ಗುರುತಿನ ಚೀಟಿ ಕಡ್ಡಾಯ ಎಂದು ಆಯೋಗ ಹೇಳಿದೆ. ಚುನಾವಣಾ ಸಂದರ್ಭ ‘ಪೈಡ್ ನ್ಯೂವ್ಸ್' ಕುರಿತೂ ಚುನಾವಣಾ ಆಯೋಗ ಹದ್ದುಗಣ್ಣು ಇರಿಸುತ್ತದೆ. ಇಂತಹ ಸುದ್ದಿ ಕಂಡು ಹಿಡಿಯಲು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಸಹಕಾರ ಪಡೆಯಲಿದೆ. ಕಪ್ಪುಹಣ ಬಟವಾಡೆ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಅನುಸರಿಸಲಾಗುತ್ತದೆ.