ಸೋಮವಾರಪೇಟೆ, ನ. 21: ಇತ್ತೀಚೆಗೆ ಐಗೂರಿನ ಮಸೀದಿಯೊಂದ ರಲ್ಲಿ ಕುರ್‍ಆನ್ ಹಾಗೂ ಕಾರಿಗೆ ಬೆಂಕಿ ಹಾಕಿರುವ ಘಟನೆಯನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ತಾಲೂಕು ದಲಿತಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಟಿ.ಈ. ಸುರೇಶ್, ಘಟನೆಗೆ ಸಂಬಂಧಿಸಿದ ತನಿಖೆಯನ್ನು ಚುರುಕುಗೊಳಿಸಿ ತಪ್ಪಿತಸ್ಥರನ್ನು ಕಂಡು ಹಿಡಿದು ಸೂಕ್ರ ಕ್ರಮ ತೆಗೆದುಕೊಳ್ಳ ಬೇಕೆಂದು ಆಗ್ರಹಿಸಿದರು.

ಘಟನೆ ನಡೆದು ಹಲವು ದಿನಗಳಾದರೂ ಈವರೆಗೆ ಆರೋಪಿಗಳನ್ನು ಕಂಡು ಹಿಡಿಯಲು ಪೊಲೀಸ್ ಇಲಾಖೆಗೆ ಸಾಧ್ಯವಾಗಿಲ್ಲ. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಆದಷ್ಟು ಬೇಗ ತಪ್ಪಿತಸ್ಥರನ್ನು ಬಂಧಿಸಬೇಕೆಂದು ಆಗ್ರಹಿಸಿದರು.

ಒಕ್ಕೂಟದ ಸಲಹೆಗಾರ ಜೆ.ಆರ್. ಪಾಲಾಕ್ಷ ಮಾತನಾಡಿ, ಶಾಂತಿಯುತ ಜಿಲ್ಲೆಯಲ್ಲಿ ಇತ್ತೀಚೆಗೆ ಶಾಂತಿ ಕದಡುವ ಪ್ರಕರಣಗಳು ನಡೆಯುತ್ತಿವೆ. ಇದರಿಂದ ಸಾರ್ವಜನಿಕರ ನೆಮ್ಮದಿ ಹಾಳಾಗುತ್ತಿದ್ದು, ವ್ಯಾಪಾರ ವಹಿವಾಟುಗಳಿಗೆ ಹಿನ್ನಡೆಯಾಗುತ್ತಿದೆ. ಜಿಲ್ಲೆಯಲ್ಲಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಜೆ.ಎಲ್. ಜನಾರ್ಧನ, ಡಿ.ಎಸ್. ಕಾಂತರಾಜು, ಜಯಪ್ಪ ಹಾನಗಲ್, ಡಿ.ವಿ ಜಗದೀಶ್ ಉಪಸ್ಥಿತರಿದ್ದರು.