ಸೋಮವಾರಪೇಟೆ,ನ.30: ತಾಲೂಕಿನ ಐಗೂರು ಗ್ರಾಮದಲ್ಲಿ ನಡೆದ ಎರಡು ಘಟನೆಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು. ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಆಗ್ರಹಿಸಿದರು.
ಐಗೂರಿನ ಜಾಮಿಯಾ ಮಸೀದಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಶಾಂತಿ ಸೌಹಾರ್ದತೆಗೆ ಹೆಸರಾದ ಕೊಡಗು ಜಿಲ್ಲೆಯಲ್ಲಿ ಹಿಂದೂ, ಮುಸ್ಲಿಂ ಜನಾಂಗಗಳ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಕೋಮು ಶಕ್ತಿಗಳು ಮಾಡುತ್ತಿವೆ. ಸೌಹಾರ್ದಯುತ ವಾತಾವರಣವನ್ನು ಕೆಡಿಸುವದೇ ಇವರ ಒಂದಂಶದ ಕಾರ್ಯಕ್ರಮ ವಾಗಿದೆ ಎಂದು ದೂರಿದರು.
ಐಗೂರಿನ ಮಸೀದಿaಯಲ್ಲಿ ಕುರಾನ್ ಗ್ರಂಥವನ್ನು ಸುಟ್ಟು ಹಾಕಿರುವ ಘಟನೆ ಮತ್ತು ಹಿಂದೂಪರ ಸಂಘಟನೆಯ ವಕೀಲರೊಬ್ಬರ ಕಾರಿಗೆ ಬೆಂಕಿ ಹಚ್ಚಿರುವ ಪ್ರಕರಣ ಖಂಡನೀಯ. ಟಿಪ್ಪು ಜಯಂತಿಯನ್ನು ವಿರೋಧಿಸುತ್ತ ಬಂದಿರುವ ಒಂದು ಗುಂಪು ಐಗೂರಿನಲ್ಲಿ ಇಂತಹ ಕೃತ್ಯವನ್ನು ನಡೆಸಿದೆ. ಈ ಪ್ರಕರಣದ ತನಿಖೆಯನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕಾಗಿದೆ ಎಂದರು.
ಕೊಡಗಿನಲ್ಲಿ ಈ ಹಿಂದೆ ದನಗಳನ್ನು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಕೆಲವು ಕಿಡಿಗೇಡಿಗಳ ಪಾತ್ರವೂ ಇದೆ. ಶೀಘ್ರದಲ್ಲಿ ಇವರನ್ನು ಬಂಧಿಸಬೇಕು. ಸಂಘ ಪರಿವಾರ ಮತ್ತು ಆರ್‍ಎಸ್‍ಎಸ್‍ನಲ್ಲಿರುವ ಕೆಲ ಹಿಂದೂ ಮಲಯಾಳಿಗಳು ಮತ್ತು ಬಿಲ್ಲವರ ಒಂದು ಗುಂಪು ವ್ಯವಸ್ಥಿತವಾಗಿ ಕೋಮುಗಲಭೆಯನ್ನು ಸೃಷ್ಟಿಸುವ ಹುನ್ನಾರ ನಡೆಸುತ್ತಿದೆ. ಐಗೂರಿನಲ್ಲಿ ನಡೆದ ಪ್ರಕರಣದಲ್ಲಿ ಭಾಗಿಯಾದ ವರಿಗೆ ತಕ್ಕ ಶಿಕ್ಷೆ ಆಗಬೇಕು. ಆದರೆ ಅಮಾಯಕರನ್ನು ಬಂಧಿಸಬಾರದು ಎಂದರು. ‘ಹೊಸತೋಟದ ಜಾಮೀಯ ಮಸೀದಿಯ ಆಡಳಿತ ಮಂಡಳಿಯವರು ನನ್ನನ್ನು ಕರೆದಿದ್ದಕ್ಕೆ ನಾನು ಬಂದಿದ್ದೇನೆ. ನಾಳೆ ದಿನ ಅವರುಗಳು ಕಾರು ಸುಟ್ಟಿರುವ ಸ್ಥಳಕ್ಕೆ ಏಕೆ ಹೋಗಿಲ್ಲ ಎಂದು ಕೇಳಬಹುದು; ಇಲ್ಲಿಗೆ ಇವರು ಕರೆದುಕೊಂಡು ಬಂದದ್ದಕ್ಕೆ ಬಂದಿದ್ದೇನೆ. ಅವರುಗಳು ಬಂದು ನನ್ನನ್ನು ಕರೆದುಕೊಂಡು ಹೋದರೆ ಅಲ್ಲಿಗೂ ಹೋಗುತ್ತೇನೆ. ಅವರು ಕರೀಲಿಕ್ಕೆ ಬಂದಿಲ್ಲ ಅದಕ್ಕೆ ನಾನು ಹೋಗ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ, ಪ್ರಮುಖರಾದ ಪಿ.ಸಿ. ಹಸೈನಾರ್, ಹೊಸತೋಟ ಜಾಮೀಯ ಮಸೀದಿಯ ಅಧ್ಯಕ್ಷ ಸೈದು ಹಾಜೀ ಸೇರಿದಂತೆ ಇತರರು ಉಪಸ್ಥಿತರಿದ್ದರು.