ಮಡಿಕೇರಿ, ನ. 15: ಐಗೂರು ಮಸೀದಿಯಲ್ಲಿ ಪವಿತ್ರ ಗ್ರಂಥ ಕುರ್‍ಆನ್‍ಗೆ ಬೆಂಕಿ ಹಚ್ಚಿದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕೊಡಗು ಮುಸ್ಲಿಂ ಸಮಾಜ ಆರೋಪಿಗಳ ಬಂಧನಕ್ಕೆ ಪೊಲೀಸರಿಗೆ ಒಂದು ವಾರದ ಗಡುವು ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಸಮಾಜದ ಕಾರ್ಯಾಧ್ಯಕ್ಷ ಖಾಸಿಂ ಪವಿತ್ರ ಗ್ರಂಥ ಕುರ್‍ಆನ್‍ಗೆ ಬೆಂಕಿ ಹಚ್ಚಿರುವದು ಮುಸಲ್ಮಾನ ಸಮುದಾಯಕ್ಕೆ ಅತೀವ ನೋವನ್ನು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೆಲವರು ಮತೀಯ ಭಾವನೆಗಳನ್ನು ಕೆಣಕುವ ಮೂಲಕ ಗಲಭೆಯನ್ನು ಸೃಷ್ಟಿಸಿ ಮುಂದಿನ ಚುನಾವಣೆಯಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು. ಪೊಲೀಸ್ ಇಲಾಖೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆಯಾದರೂ ಐಗೂರು ಪ್ರಕರಣದಲ್ಲಿ ಇನ್ನಷ್ಟು ಚುರುಕಿನ ತನಿಖೆ ನಡೆಸಬೇಕು ಮತ್ತು ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಅವರು ಒತ್ತಾಯಿಸಿದರು. ಈ ಹಿಂದೆಯೂ ಇದೇ ಮಸೀದಿಗೆ ಪ್ರಾರ್ಥನೆಗೆಂದು ಬಂದಿದ್ದವರ ವಾಹನವನ್ನು ಜಖಂಗೊಳಿಸಲಾಗಿದೆ. ಕೆಲವು ತಿಂಗಳುಗಳ ಹಿಂದೆ ಕುಶಾಲನಗರ ಮಸೀದಿಗೂ ಕಲ್ಲು ತೂರಾಟ ನಡೆಸಲಾಗಿದೆ. ಆದರೆ ಎರಡೂ ಪ್ರಕರಣಗಳ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲವೆಂದು ಖಾಸಿಂ ಅಸಮಾಧಾನ ವ್ಯಕ್ತಪಡಿಸಿದರು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳ ಬಂಧನವಾಗಿದ್ದರೆ ಕುರ್‍ಆನ್‍ಗೆ ಬೆಂಕಿ ಹಚ್ಚುವ ದುಷ್ಕøತ್ಯ ನಡೆಯುತ್ತಿರಲಿಲ್ಲವೆಂದು ಅವರು ಅಭಿಪ್ರಾಯಪಟ್ಟರು.

ಮುಸಲ್ಮಾನ ಸಮುದಾಯ ಯಾವದೇ ಕಾರಣಕ್ಕೂ ಪ್ರಚೋದನೆಗೆ ಒಳಗಾಗದೆ ಮತ್ತು ವದಂತಿಗಳಿಗೆ ಕಿವಿಗೊಡದೆ ಶಾಂತಿಯನ್ನು ಕಾಪಾಡಬೇಕೆಂದು ಖಾಸಿಂ ಇದೇ ಸಂದರ್ಭ ಮನವಿ ಮಾಡಿದರು.

ಕಾರ್ಯದರ್ಶಿ ಅಮಿನ್ ಮೊಹಿಸಿನ್ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಐಗೂರು ಗ್ರಾಮ ಪಟ್ಟಭದ್ರ ಹಿತಾಸಕ್ತಿಗಳ ಪ್ರದೇಶವಾಗಿ ಮಾರ್ಪಡುತ್ತಿದ್ದು, ಮುಸಲ್ಮಾನರಲ್ಲಿ ಭಯದ ವಾತಾವರಣವನ್ನು ಮೂಡಿಸಲಾಗುತ್ತಿದೆ ಎಂದು ಆರೋಪಿಸಿದರು. ಸುಮಾರು 23 ಮುಸಲ್ಮಾನ ಕುಟುಂಬಗಳು ಈ ಗ್ರಾಮದಲ್ಲಿ ವಾಸಿಸುತ್ತಿದ್ದವಾದರೂ ಇದೀಗ ಎಲ್ಲರೂ ಆಸ್ತಿಯನ್ನು ಮಾರಾಟ ಮಾಡಿ ಗುಳೆ ಹೋಗಿದ್ದಾರೆ, ಕೇವಲ ನಾಲ್ಕು ಕುಟುಂಬಗಳು ಮಾತ್ರ ಉಳಿದುಕೊಂಡಿವೆ ಎಂದರು. ಕುರ್‍ಆನ್‍ಗೆ ಬೆಂಕಿ ಹಚ್ಚಿರುವದು ಮತ್ತು ಪದ್ಮನಾಭ ಎಂಬವರ ಕಾರಿಗೆ ಹಾನಿ ಮಾಡಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಎರಡೂ ಪ್ರಕರಣಗಳ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಹಾಗೂ ಸಂಸದರು ಇರುವದರಿಂದ ಪೊಲೀಸ್ ತನಿಖೆ ಮೇಲೆ ಸತತ ಒತ್ತಡ ಹೇರುವ ಸಾಧ್ಯತೆಗಳಿದ್ದು, ಪೊಲೀಸ್ ಅಧಿಕಾರಿಗಳು ಇದಕ್ಕೆ ಮಣಿಯಬಾರದೆಂದರು.

ಸಮಾಜದ ಪ್ರಮುಖರಾದ ಹನೀಫ್ ಮಾತನಾಡಿ; ಐಗೂರು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು. ಸಮಾಜ ಘಾತುಕ ಶಕ್ತಿಗಳು ಕೊಡಗಿನಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದ್ದು, ಅಭಿವೃದ್ಧಿಗೆ ತಡೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿದರು. ಕುರ್‍ಆನ್ ಹಾಗೂ ಕಾರಿಗೆ ಬೆಂಕಿ ಹಚ್ಚಿದವರು ದೇಶಭಕ್ತರಲ್ಲವೆಂದು ಹನೀಫ್ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಮನ್ಸೂರ್ ಆಲಿ, ಪ್ರಮುಖರಾದ ಅಬ್ದುಲ್ ಕರೀಂ ಹಾಗೂ ಮೊೈದು ಉಪಸ್ಥಿತರಿದ್ದರು.