ಸೋಮವಾರಪೇಟೆ, ನ. 15: ಶಾಂತಿಪ್ರಿಯ ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ದುರ್ಘಟನೆಗಳಿಗೆ ಕೇರಳ ಮೂಲದ ಮಾಫಿಯಾ ಕಾರಣ ಎಂದು ಸಂಸದೆ ಹಾಗೂ ಬಿಜೆಪಿ ಮಹಿಳಾ ಘಟಕದ ಮುಖಂಡರಾದ ಶೋಭಾ ಕರಂದ್ಲಾಜೆ ಆರೋಪಿಸಿದರು.

ತಾ. 13 ರ ರಾತ್ರಿ ಐಗೂರಿನಲ್ಲಿ ನಡೆದ ಆರ್‍ಎಸ್‍ಎಸ್ ಮುಖಂಡ ಪದ್ಮನಾಭ್ ಅವರ ಕಾರಿನ ಮೇಲಿನ ಧಾಳಿ ಘಟನೆಗೆ ಸಂಬಂಧಿಸಿದಂತೆ ಇಂದು ಸಂಜೆ ಪದ್ಮನಾಭ್ ಅವರ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರೊಂದಿಗೆ ಘಟನೆಯ ಮಾಹಿತಿ ಪಡೆದ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ರಾಜ್ಯದಾದ್ಯಂತ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ನಿರಂತರವಾಗಿ ಹಲ್ಲೆ ಹಾಗೂ ಹತ್ಯೆಗೈಯಲಾಗುತ್ತಿದ್ದು, ಈ ಎಲ್ಲಾ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಕೊಡಗು ಜಿಲ್ಲೆ ಶಾಂತಿ ಪ್ರಿಯವಾಗಿದ್ದು, ವೀರತನಕ್ಕೂ ಹೆಸರಾಗಿದೆ. ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ನಡೆಯುತ್ತಿರುವ ದುಷ್ಕøತ್ಯಗಳ ಹಿಂದೆ ಕೇರಳ ಮೂಲದ ಮಾಫಿಯಾ ಕೈವಾಡವಿದೆ. ನಿಷೇಧಿತ ಸಿಮಿ ಸಂಘಟನೆಯ ಅಂಗಗಳಾಗಿರುವ ಸಂಘಟನೆಗಳಿಂದ ನಿರಂತರವಾಗಿ ಶಾಂತಿಭಂಗವಾಗುತ್ತಿದೆ. ಕೇರಳದಲ್ಲಿ ತರಬೇತಿ ಪಡೆದ ದುಷ್ಕರ್ಮಿಗಳು ಕೊಡಗು ಸೇರಿದಂತೆ ರಾಜ್ಯದ ಇತರೆಡೆಗಳಲ್ಲೂ ಸಮಾಜಘಾತುಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಶೋಭಾ ಅವರು ಹೇಳಿದರು.

ದನ ಕದಿಯುತ್ತಿದ್ದ ಸಂದರ್ಭ ಪೊಲೀಸರ ಗುಂಡಿಗೆ ಬಲಿಯಾದ ಕಬೀರ್‍ನ ಕುಟುಂಬಕ್ಕೆ ಕಾಂಗ್ರೆಸ್ ಸರ್ಕಾರ ರೂ. 10 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಅದೇ ಕಳೆದ 14 ತಿಂಗಳಿನಿಂದ ರಾಜ್ಯದಲ್ಲಿ ಹಿಂದೂಪರ ಸಂಘಟನೆಗಳ 18 ಕಾರ್ಯಕರ್ತರ ಕೊಲೆ ಮತ್ತು ಹಲ್ಲೆ ಪ್ರಕರಣಗಳು ನಡೆದಿವೆ. ಇವರುಗಳಿಗೆ ಪರಿಹಾರವಿರಲಿ, ಕನಿಷ್ಟ ಸಾಂತ್ವನ ಹೇಳಲೂ ಸಹ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಾಗೂ ಜಿಲ್ಲಾಡಳಿತಗಳು ಮುಂದಾಗಿಲ್ಲ. ಕಾಂಗ್ರೆಸ್ ಸರ್ಕಾರ ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿದೆ ಎಂಬದು ರುಜುವಾತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐಗೂರಿನಲ್ಲಿ ದುಷ್ಕರ್ಮಿಗಳ ಧಾಳಿಯಿಂದ ನಷ್ಟಕ್ಕೊಳಗಾಗಿರುವ ಪದ್ಮನಾಭ್ ಅವರಿಗೆ ಸರ್ಕಾರ ತಕ್ಷಣ ಪರಿಹಾರ ಒದಗಿಸಬೇಕು. ಕಾರಿನ ಮೇಲೆ ಪೆಟ್ರೋಲ್ ಬಾಂಬ್ ಧಾಳಿ ನಡೆಸಿದ ಕಿಡಿಗೇಡಿಗಳನ್ನು ಪತ್ತೆಹಚ್ಚುವ ಮೂಲಕ ಇವರ ಹಿಂದಿರುವ ಕಾಣದ ಕೈಗಳನ್ನು ಸಮಾಜಕ್ಕೆ ತೋರಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ಶೋಭಾ ಆಗ್ರಹಿಸಿದರು.

ಕೇರಳದಲ್ಲಿರುವ ಕೊಲೆ ರಾಜಕಾರಣ ಈಗ ಕರ್ನಾಟಕದಲ್ಲಿ ತನ್ನ ಕಬಂಧ ಬಾಹುವನ್ನು ವಿಸ್ತರಿಸಿಕೊಂಡಿದೆ. ಮೈಸೂರಿನ ರಾಜು, ಬೆಂಗಳೂರಿನ ರುದ್ರೇಶ್ ಕೊಲೆ ಪ್ರಕರಣಗಳೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಪಿಎಫ್‍ಐ, ಕೆಎಫ್‍ಡಿ ಮತ್ತು ಇವೆರಡು ಸಂಘಟನೆಗಳ ಮುಖವಾಣಿಯಾಗಿ ರಾಜಕೀಯವಾಗಿ ಗುರುತಿಸಿಕೊಂಡಿ ರುವ ಎಸ್‍ಡಿಪಿಐ ಪಕ್ಷ ನಿಷೇಧಿತ ಸಿಮಿ ಸಂಘಟನೆಯ ಯೋಜನೆಗಳನ್ನು ಜಾರಿಗೊಳಿಸಲು ಯತ್ನಿಸುತ್ತಿವೆ. ರಾಜ್ಯ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಕೆಎಫ್‍ಡಿ ಸಂಘಟನೆಯ ಸದಸ್ಯರ ಮೇಲಿದ್ದ ಕ್ರಿಮಿನಲ್ ಕೇಸ್‍ಗಳನ್ನು ಹಿಂಪಡೆಯುವ ಮೂಲಕ ಸಮಾಜಘಾತುಕ ಶಕ್ತಿಗಳಿಗೆ ಮತ್ತಷ್ಟು ಬೆಂಬಲ ನೀಡುವ ಕೆಲಸ ಮಾಡಿದೆ. ಸರ್ಕಾರವೇ ನಮ್ಮ ಬೆನ್ನಿಗಿದೆ ಎಂಬ ಧೈರ್ಯದಿಂದ ಈ ಸಂಘಟನೆಯ ಕಾರ್ಯಕರ್ತರು ಇಂದಿಗೂ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಇಂತಹ ಸಂಘಟನೆಗಳನ್ನು ರಾಜ್ಯ ಸರ್ಕಾರ ನಿಷೇಧಿಸಬೇಕು. ಕೊಡಗು ಸೇರಿದಂತೆ ರಾಜ್ಯದಾದ್ಯಂತ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲಿನ ಹತ್ಯೆ, ಹಲ್ಲೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು ಎಂದು ಆಗ್ರಹಿಸಿದ ಸಂಸದರು, ಕಾಂಗ್ರೆಸ್ ಒಂದು ವರ್ಗದ ತುಷ್ಟೀಕರಣ ಬಿಡಬೇಕು. ಅಧಿಕಾರಿಗಳೂ ಸಹ ಕಾನೂನಾತ್ಮಕ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಸಮಾಜವಿದ್ರೋಹಿಗಳ ಕೃತ್ಯಕ್ಕೆ ಯಾವದೇ ಕಾರಣಕ್ಕೂ ಅವಕಾಶ ನೀಡುವದಿಲ್ಲ ಎಂದರು.

ಈ ಸಂದರ್ಭ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘಚಾಲಕ್ ಚಕ್ಕೇರ ಮನು, ವಿಭಾಗ ಪ್ರಚಾರಕ್ ನ. ಸೀತಾರಾಮ್, ತಾಲೂಕು ಧರ್ಮ ಜಾಗರಣಾ ಅಧ್ಯಕ್ಷ ಬನ್ನಳ್ಳಿ ಗೋಪಾಲ್ ಸೇರಿದಂತೆ ಭಾರತೀಯ ಜನತಾ ಪಾರ್ಟಿಯ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.