ಮಡಿಕೇರಿ, ಡಿ. 21: ಹತ್ತು ಕುಟುಂಬ ಹದಿನೆಂಟು ಗೋತ್ರದ ಹಿರಿಮೆ ಹೊಂದಿರುವ ಗೌಡ ಜನಾಂಗದ ನಡುವೆ ವರ್ಷಂಪ್ರತಿ ಆಚರಿಸಿಕೊಂಡು ಬರಲಾಗುತ್ತಿರುವ ಕಟುಂಬವಾರು ಕ್ರಿಕೆಟ್ ಜಂಬರ 2017ನೇ ಸಾಲಿನ ಸಾರಥ್ಯವನ್ನು ಪೈಕೇರ ಕುಟುಂಬಸ್ಥರು ವಹಿಸಿಕೊಂಡಿದ್ದು, ಏಪ್ರಿಲ್ 21ರಿಂದ ಮೇ7ರವರೆಗೆ ಮಡಿಕೇರಿಯ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಾವಳಿಯ ಲಾಂಚನವನ್ನು ಇಂದು ಬಿಡುಗಡೆ ಮಾಡಲಾಯಿತು.
ಕೊಡಗು ಗೌಡ ಯುವ ವೇದಿಕೆ ವತಿಯಿಂದ ಪೈಕೇರ ಕುಟುಂಬಸ್ಥರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಕ್ರಿಕೆಟ್ ಉತ್ಸವದ ಲಾಂಛÀನವನ್ನು ಇಂದು ಬಿಳಿಗೇರಿಯ ಪೈಕೇರ ಕುಟುಂಬದ ಐನ್ ಮನೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಕುಟುಂಬದ ಪಟ್ಟೆದಾರ ನಂಜುಂಡ ಅವರು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಕ್ರೀಡಾಕೂಟದ ಯಶಸ್ಸಿಗೆ ಎಲ್ಲರ ಸಹಕಾರ ಅತ್ಯಗತ್ಯವಾಗಿದ್ದು ಸಹಕರಿಸುವಂತೆ ಮನವಿ ಮಾಡಿದರು. ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಮಾತನಾಡಿ, 17 ವರ್ಷಗಳ ಹಿಂದೆ ಕೊಡಗು ಗೌಡ ಸಾಂಸ್ಕøತಿಕ ಅಕಾಡೆಮಿ
(ಮೊದಲ ಪುಟದಿಂದ) ಕ್ರಿಕೆಟ್ ಉತ್ಸವವನ್ನು ಆರಂಭಿಸಿದ್ದು, ಕಳೆದ 4 ವರ್ಷಗಳಿಂದ ಯುವ ವೇದಿಕೆ ಜವಾಬ್ದಾರಿ ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದೆ. ಕಳೆದ ವರ್ಷ ಕುಟ್ಟನ ಕಪ್ ಉತ್ಸವದಲ್ಲಿ 172 ಕುಟುಂಬ ತಂಡಗಳು ಪಾಲ್ಗೊಂಡಿದ್ದವು, ಈ ಬಾರಿ 250 ಕುಟುಂಬ ತಂಡಗಳ ನಿರೀಕ್ಷೆ ಮಾಡಲಾಗಿದೆ. ಮುಂಬರುವ ಏಪ್ರಿಲ್ 21ರಿಂದ ಮೇ 7ರವರೆಗೆ 17 ದಿನಗಳ ಕಾಲ ಕ್ರಿಕೆಟ್ ಉತ್ಸವ ನಡೆಯಲಿದೆ ಎಂದು ತಿಳಿಸಿದರು. ಉತ್ಸವಕ್ಕೆ ಸರ್ವರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್ ಮಾತನಾಡಿ ಈ ಬಾರಿ 250 ತಂಡಗಳ ನಿರೀಕ್ಷೆ ಮಾಡಲಾಗಿದ್ದು, ಅಂದಾಜು 40ಲಕ್ಷದಷ್ಟು ವೆಚ್ಚವಾಗಲಿದೆ, ಯುವ ವೇದಿಕೆ ಉತ್ಸವಕ್ಕೆ ಸಂಪೂರ್ಣ ಸಹಕರಿಸಲಿದೆ ಎಂದರು. ಯುವ ವೇದಿಕೆ ಪ್ರಚಾರ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಅರೆಭಾಷಿಕ ಗೌಡ ಜನಾಂಗದ ಸಂಘಟನೆ ಹಾಗೂ ಒಗ್ಗಟ್ಟಿಗೆ ನಾಂದಿ ಹಾಡಿರುವದೇ ಈ ಕ್ರಿಕೆಟ್ ಉತ್ಸವವಾಗಿದ್ದು ಇದಕ್ಕೆ ಬುನಾದಿ ಹಾಕಿದ ಕೊಡಗು ಗೌಡ ಸಾಂಸ್ಕøತಿಕ ಅಕಾಡೆಮಿಯನ್ನು ಸ್ಮರಿಸಿಕೊಳ್ಳಬೇಕಿದೆ, ಇದೀಗ ಕಳೆದ 3 ವರ್ಷಗಳಲ್ಲಿ ಯುವ ವೇದಿಕೆ ಈ ಉತ್ಸವವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದೆ, ಈ ಬಾರಿ ಕೂಡ ಯಾವದೇ ವ್ಯತ್ಯಯಗಳಾಗದಂತೆ ವ್ಯವಸ್ಥಿತ ರೀತಿಯಲ್ಲಿ ಆಚರಿಸುವಂತಾಗಬೇಕೆಂದು ಸಲಹೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೈಕೇರ ಕುಟುಂಬದ ಕ್ರಿಕೆಟ್ ಸಮಿತಿ ಅಧ್ಯಕ್ಷ ಪೈಕೇರ ಅನಂತ್‍ರಾಂ ಮಾತನಾಡಿ, ಕ್ರಿಕೆಟ್ ಉತ್ಸವವನ್ನು ಯಶಸ್ವಿಯಾಗಿ ಆಚರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಎಲ್ಲರ ಸಲಹೆ ಸಹಕಾರದೊಂದಿಗೆ ಒಗ್ಗಟ್ಟಿನಿಂದ ಕಾರ್ಯಕ್ರಮ ಆಯೋಜಿಸಲಾಗುವದು, ಕ್ರೀಡಾಕೂಟ ಇತರರಿಗೆ ಮಾದರಿಯಾಗುವಂತಿರಬೇಕೆಂದು ಹೇಳಿದರು. ವೇದಿಕೆಯಲ್ಲಿ ಪೈಕೇರ ಕುಟುಂಬದ ಗೌರವ ಕಾರ್ಯದರ್ಶಿ ಮಾಚಯ್ಯ ಇದ್ದರು. ಪೈಕೇರ ಇಂದಿರಾ ತಿಮ್ಮಯ್ಯ ಪ್ರಾರ್ಥಿಸಿದರು. ಪೈಕೇರ ಕುಟುಂಬಸ್ಥರು, ನೆರೆಕರೆಯವರು ಪಾಲ್ಗೊಂಡಿದ್ದರು.