ಮಡಿಕೇರಿ, ಜು. 23: ಎಸ್.ಎಸ್.ಎಲ್.ಸಿ. ಫಲಿತಾಂಶ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಕೈಗನ್ನಡಿಯಾಗಿದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಫಲಿತಾಂಶ ಹೆಚ್ಚಳಕ್ಕೆ ಇನ್ನಷ್ಟು ಪ್ರಯತ್ನ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚನೆ ನೀಡಿದ್ದಾರೆ.
ನಗರದ ಸಂತ ಮೈಕಲರ ಶಾಲೆಯಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಉಪಸ್ಥಿತಿಯಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮ ಪಡಿಸುವದು ಮತ್ತು ಶೈಕ್ಷಣಿಕ ಚಟುವಟಿಕೆ ಸುಧಾರಣೆ ಸಂಬಂಧ ನಡೆದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಿಕ್ಷಕರು ಮಾನವ ಸಂಪನ್ಮೂಲದ ಶಿಲ್ಪಿಗಳಾಗಿದ್ದು, ಬರೀ ಹೊಟ್ಟೆ ಪಾಡಿಗಾಗಿ ಕೆಲಸ ಮಾಡುವವರಲ್ಲ. ಸಮಾಜ ರೂಪಿಸುವ ಕೆಲಸ ಮಾಡುವವರು ಎಂಬದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು 80 ಅಂಕಕ್ಕೆ ಕೇವಲ 28 ಅಂಕ ಪಡೆಯದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಮಕ್ಕಳಿಗೆ ಸರಿಯಾದ ಮಾರ್ಗದರ್ಶನ, ಸಲಹೆ ನೀಡಿ ಫಲಿತಾಂಶ ಸುಧಾರಣೆಯತ್ತ ಹೆಚ್ಚಿನ ಗಮನಹರಿಸಬೇಕಿದೆ ಎಂದು ಹೇಳಿದರು.
ಸಮಾಜದಲ್ಲಿ ಬಡತನ, ಅನಕ್ಷರತೆ, ಅಸಮಾನತೆ, ಮೂಡನಂಭಿಕೆ, ಆರೋಗ್ಯ ಮತ್ತಿತರ ಸಮಸ್ಯೆಗಳು ಇರಬಹುದು. ಆದರೆ ಸರ್ಕಾರ ಮಧ್ಯಾಹ್ನದ ಬಿಸಿಯೂಟ, ಬೈಸಿಕಲ್, ಸಮವಸ್ತ್ರ, ಪಠ್ಯಪುಸ್ತಕ, ವಿದ್ಯಾರ್ಥಿ ನಿಲಯ, ಹೀಗೆ ಹಲವು ಕಾರ್ಯಕ್ರಮಗಳನ್ನು ಒದಗಿಸುತ್ತಿದೆ. ಆದರೂ ಫಲಿತಾಂಶ ಕುಸಿತಕ್ಕೆ ಕಾರಣವೇನು ಎಂಬ ಬಗ್ಗೆ ಅವಲೋಕನ ಮಾಡಬೇಕಿದೆ ಎಂದು ಹೇಳಿದರು. ಶಿಕ್ಷಕರು ತಾವು ಉಪನ್ಯಾಸ ನೀಡುವ ವಿಷಯದಲ್ಲಿ ನಿರೀಕ್ಷಿತ ಫಲಿತಾಂಶ ಬರದಿದ್ದಲ್ಲಿ ಶಿಕ್ಷಕರ ವಿರುದ್ಧವೇ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್. ಬಸವರಾಜು ಮಾತನಾಡಿ, ಕೊಡಗು ಜಿಲ್ಲೆ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ 18ನೇ ಸ್ಥಾನದಲ್ಲಿದೆ. ಕಳೆದ ಬಾರಿಯೂ 18ನೇ ಸ್ಥಾನದಲ್ಲಿತ್ತು, ಫಲಿತಾಂಶ ಉತ್ತಮ ಪಡಿಸಲು ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಪ್ರಯತ್ನಿಸಬೇಕು ಎಂದು ಹೇಳಿದರು.
ಶಿಕ್ಷಕರು ಪಾಠ ಮಾಡುವದರ ಜೊತೆಗೆ ವಿದ್ಯಾರ್ಥಿಗಳ ಬರವಣಿಗೆಯನ್ನು ಸಹ ಗಮನಿಸಬೇಕು. ಜೊತೆಗೆ ಸಂವಾದ, ಚರ್ಚೆಗಳನ್ನು ನಡೆಸಬೇಕು. ಮಕ್ಕಳ ಕಲಿಕೆಯ ಬಗ್ಗೆ ಖಾತರಿಪಡಿಸಿ ಕೊಳ್ಳುವತ್ತ ನಿಗಾವಹಿಸಬೇಕು. ಮಕ್ಕಳಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದರು. ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಶೇ. 83 ರಷ್ಟು ಫಲಿತಾಂಶ ಬಂದಿದ್ದರೆ, ಇಂಗ್ಲೀಷ್ ಭಾಷೆಯಲ್ಲಿ ಶೇ. 91 ರಷ್ಟು ಫಲಿತಾಂಶ ಬಂದಿದೆ. ಗಣಿತ ಮತ್ತು ವಿಜ್ಞಾನ ಭಾಷೆಯ ವಿಷಯಗಳ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಅವರು ಹೇಳಿದರು. ಹತ್ತಿರದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಒಂದು, ಎರಡನೇ ಸ್ಥಾನದಲ್ಲಿರ ಬೇಕಾದರೆ, ಕೊಡಗು ಜಿಲ್ಲೆ ಯಾಕೆ ಹಿಂದಿದೆ ಎಂಬದನ್ನು ಆತ್ಮವಲೋಕನ ಮಾಡುವದು ಅಗತ್ಯ. ಜಿಲ್ಲೆಯ ಫಲಿತಾಂಶವನ್ನು ಗಮನಿಸಿದಾಗ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಿದೆ. ಆದರೆ ಗಂಡು ಮಕ್ಕಳ ಅನುತ್ತೀರ್ಣ ಸಂಖ್ಯೆ ಹೆಚ್ಚಿದೆ ಎಂದು ತಿಳಿಸಿದರು.
ಡಯಟ್ ಪ್ರಾಂಶುಪಾಲ ದೊಡ್ಡಮಲ್ಲಪ್ಪ, ಉಪ ಯೋಜನಾ ಸಮನ್ವಯಾಧಿಕಾರಿ ಭಾಗ್ಯಲಕ್ಷ್ಮಿ, ವಿಷಯ ಪರಿವೀಕ್ಷಕರಾದ ದೇವನಾಯಕ್, ಮಹದೇವು, ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು ಪಾಲ್ಗೊಂಡಿದ್ದರು.