ಮಡಿಕೇರಿ, ಜ. 25: ‘ಎಲ್ಲಾ ಜೀವಿಗಳೂ ಅನುಕ್ಷಣ ಅರಸುವ ಒಂದೇ ಸಂಗತಿಯೆಂದರೆ ‘ಅಳಿಯದ ಸಂತೋಷ'. ಅದನ್ನು ಹುಡುಕುವ ಅನೇಕ ಮಾರ್ಗಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು. ಒಂದು ಬಾಹ್ಯ ವಸ್ತು ವಿಷಯ ಸಂಬಂಧಗಳಲ್ಲಿ; ಮತ್ತೊಂದು ಪ್ರತಿಯೊಬ್ಬರೊಳಗೂ ಅಡಗಿರುವ ಸಂತಸದ ಮೂಲ ಸೆಲೆಯಲ್ಲಿ'.

ಹೀಗೆ ವಿಶ್ಲೇಷಿಸಿದರವರು ಆಧ್ಯಾತ್ಮ ಗುರು ಶ್ರೀ ಎಂ ರವರು. ತಾ. 23 ರಂದು ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ‘ಯೋಗ ಮಾರ್ಗದಿಂದ ಸಂತಸದ ಸೆಲೆ ಕಂಡುಕೊಳ್ಳುವ ಬಗೆ' ಎಂಬ ಕುರಿತು ಶ್ರೀ ಎಂ ಉಪನ್ಯಾಸ ನೀಡಿದರು.

ಮನುಷ್ಯನ ಸ್ಥಿತಿ ಕಸ್ತೂರಿ ಮೃಗದಂತೆ, ತನ್ನ ಒಡಲಲ್ಲೇ ಇರುವ ಕಸ್ತೂರಿಯ ಸುಗಂಧದ ಅರಿವಿರದ ಆ ಮೃಗ ಕಂಡ ಕಂಡಲ್ಲಿ ಮೂಗು ತೂರಿ ಪರಿಮಳದ ಮೂಲವನ್ನರಸುತ್ತ ಗಾಯಗೊಳ್ಳುವಂತೆ ಮನುಷ್ಯನೂ ವಿವಿಧ ಭಾಹ್ಯ ಸಂಗತಿಗಳಲ್ಲಿ ಸಿಗಬಹುದಾದ ಕ್ಷಣಿಕ ಸುಖದಲ್ಲಿ ಶಾಶ್ವತ ಸಂತೋಷವನ್ನು ಅರಸುತ್ತ ಘಾಸಿಗೊಳಗಾಗುತ್ತಲೇ ಇರುತ್ತಾನೆ. ತನ್ನೊಳಗೇ ಹುದುಗಿರುವ ಶಾಂತಿ, ಸುಖದ ಅರಿವೇ ಇಲ್ಲದೆ ಪರಿತಪಿಸುತ್ತಾನೆ. ಈ ತೊಳಲಾಟಕ್ಕೆ ಉತ್ತರ ಯೋಗದ ಸರಳ ಸೂತ್ರದಲ್ಲಿದೆ. ಪ್ರತಿಯೊಂದು ಜೀವಿಗೂ ಮೂಲಧಾತು ಉಸಿರು. ಆ ಉಸಿರನ್ನು ಪ್ರತಿನಿತ್ಯವೂ ಕೆಲ ನಿಮಿಷಗಳ ಕಾಲವಾದರೂ ತದೇಕವಾಗಿ ಗಮನಿಸುತ್ತ ಧ್ಯಾನಸ್ಥವಾಗಿ ಕುಳಿತರೆ, ಯೋಚನೆ- ಚಿಂತೆಗಳು ತಾನಾಗಿಯೇ ತಹಬದಿಗೆ ಬಂದು ಮನಸ್ಸು ಶಾಂತ ಕೊಳದಂತಾಗಿ, ಗೊಂದಲಮಯವಾಗಿ ಕಾಣುವ ನಿತ್ಯದ ಅನೇಕ ಸಂಗತಿಗಳು ಸ್ಪಷ್ಟವಾಗುತ್ತವೆ.

ಅಂತಹ ಶಾಂತ ಸ್ಥಿತಿ ತಲಪಿದ ಮನಸ್ಸು ಎಂತಹ ಪರಿಸ್ಥಿತಿಯಲ್ಲೂ ಸ್ತಿಮಿತ ಕಳೆದುಕೊಳ್ಳುವ ಸಾಧ್ಯತೆ ಕಡಿಮೆ. ಇದಕ್ಕೆ ಅತ್ಯವಶ್ಯವಿರುವದು ಎರಡೇ - ಅನುದಿನದ ಜೀವನದಲ್ಲಿ ಆದಷ್ಟು ಪ್ರಾಮಾಣಿಕವಾಗಿ, ಇತರರಿಗೆ ನೋವಾಗದಂತೆ, ಯಾರನ್ನೂ ದ್ವೇಷಿಸದಂತೆ ಬದುಕುವದು ಮತ್ತು ನಿತ್ಯವೂ ನಿಗದಿತ ಸಮಯದಲ್ಲಿ ನಮ್ಮ ಅಸ್ತಿತ್ವದ ಅಂತಃಸತ್ವವಾದ ಉಸಿರಾಟ ವನ್ನು ಅಪ್ರಯಾಸಪೂರ್ವಕ ಗಮನಿಸುವದು' ಎಂದು ಶ್ರೀ ಎಂ ಸೋದಾಹರಣವಾಗಿ ವಿವರಿಸಿದರು.

ಇದೇ ಸಂದರ್ಭ ದೇಶದ ಶಾಂತಿ - ಸೌಹಾರ್ದಪೂರ್ಣ ಬದುಕಿಗಾಗಿ ಶ್ರೀ ಎಂ ರವರು ಕೈಗೊಂಡಿದ್ದ ಪಾದಯಾತ್ರೆ ‘ಭರವಸೆಯ ನಡಿಗೆ'ಯನ್ನು ಪೂರ್ಣಗೊಳಿಸಿದ ಅವರ ನಿಸ್ವಾರ್ಥ ಹಾಗೂ ಸರ್ವಹಿತ ಉದ್ದೇಶಗಳನ್ನು ಅಭಿನಂದಿಸುತ್ತ ಭಾರತೀಯ ವಿದ್ಯಾಭವನ, ಕೊಡಗು ಕೇಂದ್ರ ಮತ್ತು ‘ಭರವಸೆಯ ನಡಿಗೆ'ಯಲ್ಲಿ ಪಾಲ್ಗೊಂಡಿದ್ದ ಕೊಡಗಿನ ಅನೇಕರು ಶ್ರೀ ಎಂ ರವರನ್ನು ಗೌರವಿಸಿ, ಸನ್ಮಾನಿಸಿದರು. ಶ್ರೀ ಎಂ. ಕೈಗೊಂಡಿದ್ದ ‘ಭರವಸೆಯ ನಡಿಗೆಯೆ'ಯ ರಾಷ್ಟ್ರೀಯ ಸಂಚಾಲಕರಾಗಿ ಜವಾಬ್ದಾರಿ ವಹಿಸಿ ದ್ದವರು ಮಡಿಕೇರಿಯ ಶ್ರೀ ಬಾಲಾಜಿ ಕಶ್ಯಪ್ ಎಂಬದು ಗಮನಾರ್ಹ.