ಮಡಿಕೇರಿ, ಜ. 12: ಬೆಂಗಳೂರಿನ ನಾಲ್ನಾಡ್ ಕೊಡವ ಒಕ್ಕೂಟದ ಹಾಗೂ ನಾಪೋಕ್ಲು ಕೊಡವ ಸಮಾಜ ಮತ್ತು ಕೊಡವ ಸಮಾಜ ರಿಕ್ರಿಯೇಷನ್ ಕ್ಲಬ್ ನೇತೃತ್ವದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತು ಇಂಡಿಯನ್ ಡೆಂಟಲ್ ಅಸೋಸಿ ಯೇಷನ್ ಕೊಡಗು ಜಿಲ್ಲಾ ಘಟಕಗಳ ಆಶ್ರಯದಲ್ಲಿ ನಾಪೋಕ್ಲು ಕೊಡವ ಸಮಾಜದಲ್ಲಿ ತಾ. 15ರಂದು ಎಲ್ಲಾ ವರ್ಗದ ಜನಾಂಗ ಬಾಂಧವರಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ನಾಲ್ನಾಡ್ ಕೊಡವ ಒಕ್ಕೂಟದ ಸಂಚಾಲಕ ನುಚ್ಚಿಮಣಿ ಯಂಡ ಪೂಣಚ್ಚ ತಿಳಿಸಿದ್ದಾರೆ.

ಶಿಬಿರದಲ್ಲಿ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಮೈಸೂರು, ಬೃಂದಾವನ್ ಆಸ್ಪತ್ರೆ ಮೈಸೂರು, ಕೊಡಗು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮಡಿಕೇರಿ, ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ವೀರಾಜಪೇಟೆ ಅಶ್ವಿನಿ ಆಸ್ಪತ್ರೆ ಮಡಿಕೇರಿ, ವೈವಾಸ್ ಆಸ್ಪತ್ರೆ ಮಡಿಕೇರಿ, ಲೋಪಾಮುದ್ರ ಕಣ್ಣಿನ ಆಸ್ಪತ್ರೆ ಗೋಣಿಕೊಪ್ಪಲು ಅಲ್ಲದೆ ಬೆಂಗಳೂರಿನ ಸ್ತ್ರಿರೋಗ ತಜ್ಞರು, ಪ್ರನಾಳೀಯ ಫಲೀಕರಣ ತಜ್ಞರು, ಚರ್ಮರೋಗ ತಜ್ಞರು, ಮಕ್ಕಳ ತಜ್ಞರು, ವೈದ್ಯ ಶಾಸ್ತ್ರ ತಜ್ಞರು, ಮೂಗು, ಗಂಟಲು ತಜ್ಞರು, ಹೃದ್ರೋಗ ತಜ್ಞರು, ಮೂಳೆ ರೋಗ, ಹಲ್ಲಿನ ತಜ್ಞರು ಹಾಗೂ ನಾಪೋಕ್ಲು ಪಟ್ಟಣದ ಆಸ್ಪತ್ರೆಯ ತಜ್ಞರು ಭಾಗವಹಿಸಿ ಆರೋಗ್ಯ ತಪಾಸಣೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 11 ಗಂಟೆಗೆ ಸಭಾ ಕರ್ಯಕ್ರಮ ನಡೆಯಲಿದ್ದು, ಜಿಲ್ಲಾಧಿಕಾರಿ ಡಾ. ವಿನ್ಸೆಂಟ್ ರಿಚರ್ಡ್ ಡಿಸೋಜ ಉದ್ಘಾಟಿಸಲಿದ್ದಾರೆ. ಕೊಡಗು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಡೀನ್ ಮತ್ತು ಡೈರೆಕ್ಟರ್ ಡಾ. ಬಿ.ಜೆ. ಮಹೇಂದ್ರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಮಂಡೆಡ ರವಿ ಉತ್ತಪ್ಪ, ಶ್ರೀ ಪಾಡಿ ಇಗ್ಗುತ್ತಪ್ಪ ಭಕ್ತಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ಕೊಡಗು ಎಸಿಬಿ ಮತ್ತು ಲೋಕಾಯುಕ್ತ ಪಬ್ಲಿಕ್ ಪ್ರಾಸಿಕ್ಯೂಟರ್ ಮುಕ್ಕಾಟಿರ ಕಾರ್ಯಪ್ಪ, ನಾಪೋಕ್ಲು ಶ್ರೀ ರಾಮ ಟ್ರಸ್ಟ್ ಅಧ್ಯಕ್ಷ ಬೊಪ್ಪಂಡ ಬೋಪಯ್ಯ, ಮಡಿಕೇರಿ ಅಶ್ವಿನಿ ಆಸ್ಪತ್ರೆ ಕಾರ್ಯದರ್ಶಿ ಜಿ. ರಾಜೇಂದ್ರ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.