ಸೋಮವಾರಪೇಟೆ, ಜ.20: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಸದಸ್ಯ ಅಭಿಷೇಕ್ ಸಾವಿನ ಬಗ್ಗೆ ನ್ಯಾಯಕ್ಕಾಗಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೌಜನ್ಯ ನಡೆಸಿ, 20ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿರುವದು ಖಂಡನೀಯ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಸೋಮವಾರಪೇಟೆ ಘಟಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಭಿಷೇಕ್ ಮೇಲೆ ಹೂಡಿದ ಸುಳ್ಳು ದೂರು ಹಾಗೂ ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ ಪ್ರಭಾವ ಬಳಸಿ ಅದನ್ನು ಎಫ್‍ಐಆರ್ ದಾಖಲಾಗುವಂತೆ ಮಾಡಿದ್ದರಿಂದ ಅವಮಾನ ತಾಳಲಾರದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಾವಿನ ನ್ಯಾಯಕ್ಕಾಗಿ ಚಿಕ್ಕಮಗಳೂರು ಸೇರಿದಂತೆ ಎಲ್ಲೆಡೆಗಳಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆದಿದೆ.

ಅದರಂತೆ ಜ.18ರಂದು ಚಿಕ್ಕಮಗಳೂರಿನಲ್ಲಿ ಕೂಡ ಯಾವದೆ ಅನುಚಿತ ಘಟನೆಗಳು ನಡೆಯದಂತೆ ನಿಗಾ ವಹಿಸಿ ಪ್ರತಿಭಟನೆ ನಡೆಯುತ್ತಿತ್ತು. ಆದರೆ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈಯವರು ಪ್ರತಿಭಟನಾನಿರತ ಅಮಾಯಕ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಸುಮಾರು 20 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿ, ಅವರುಗಳ ವಿರುದ್ದ ಮೊಕದ್ದಮೆ ದಾಖಲಿಸಿರುವದು ತೀರಾ ಖಂಡನೀಯ. ಇವರ ಈ ವರ್ತನೆಯಿಂದ ವಿದ್ಯಾರ್ಥಿಗಳು ಎದೆಗುಂದುವದಿಲ್ಲ. ಅಭಿಷೇಕ್ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು ಎಂದು ಎಚ್ಚರಿಸಿರುವ ಪರಿಷತ್, ಮುಂದೆ ರಾಜ್ಯಾದ್ಯಂತ ಹೋರಾಟ ಮಾಡುವದಾಗಿ ಎಚ್ಚರಿಸಿದ್ದಾರೆ.

ಮನವಿಯನ್ನು ಶಿರಸ್ತೇದಾರ್ ಪೊನ್ನು ಅವರ ಮೂಲಕ ಸರ್ಕಾರ ಹಾಗೂ ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ಈ ಸಂಧರ್ಭ ಪರಿಷತ್‍ನ ನಗರ ಕಾರ್ಯದರ್ಶಿ ಜಿ.ಜಿ. ಲಿಖಿತ್, ಸಂಚಾಲಕ ದರ್ಶನ್, ಪ್ರಮುಖರುಗಳಾದ ಕೆ. ಅಭಿಷೇಕ್, ರಕ್ಷಿತ್‍ಗೌಡ, ದೀಕ್ಷಿತ್‍ಗೌಡ ಹಾಗೂ ಯಶ್ವಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.