ಸೋಮವಾರಪೇಟೆ, ಜ. 12: ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ನಡೆದಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಕಾರ್ಯದರ್ಶಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಇಲ್ಲಿನ ಎಬಿವಿಪಿ ಪದಾಧಿಕಾರಿಗಳು ತಾಲೂಕು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಚಿಕ್ಕಮಗಳೂರಿನ ಶೃಂಗೇರಿ ಕಾಲೇಜಿನಲ್ಲಿ ಎ.ಬಿ.ವಿ.ಪಿ. ವತಿಯಿಂದ ಹುತಾತ್ಮ ಯೋಧರ ಕುರಿತು ಏರ್ಪಡಿಸಲಾಗಿದ್ದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆಯಾದ ಎನ್.ಎಸ್.ಯು.ಐ. ವಿದ್ಯಾರ್ಥಿಗಳು ಅಡ್ಡಿಪಡಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಎ.ಬಿ.ವಿ.ಪಿ. ಕಾರ್ಯಕರ್ತರ ಮೇಲೆ ಕೇಸು ದಾಖಲು ಮಾಡಿದ್ದರು. ಇದರಿಂದ ತೀವ್ರ ಖಿನ್ನತೆಗೆ ಒಳಗಾಗಿ ವಿದ್ಯಾರ್ಥಿ ಅಭಿಷೇಕ್ ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್ ಬರೆದಿಟ್ಟಿದ್ದು ಇದರ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಬೇಕೆಂದು ಪದಾಧಿಕಾರಿಗಳು ಆಗ್ರಹಿಸಿದರು.

ಸರಕಾರ ದೇಶ ಭಕ್ತರ ಕಾರ್ಯಕ್ರಮಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆತ್ಮಹತ್ಯೆ ಭಾಗ್ಯವನ್ನು ನೀಡುತ್ತಿದೆ ಎಂದು ಎ.ಬಿ.ವಿ.ಪಿ. ತಾಲೂಕು ಸಂಚಾಲಕ ಬಿ.ಎಸ್. ದರ್ಶನ್ ಆರೋಪಿಸಿದರು. ವಿದ್ಯಾರ್ಥಿ ಪ್ರಮುಖರಾದ ಅಭಿಲಾಶ್, ಲಿಖಿತ್, ಪವನ್, ಯಶವಂತ್, ನಿತಿನ್, ದೀಲಿಪ್, ಜಗದೀಶ್, ಪುನೀತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.