ಸಿದ್ದಾಪುರ, ಡಿ 1: ತಾ 29 ರಂದು ಕಾವೇರಿ ಒಡಲಿನಿಂದ ಅಕ್ರಮ ಮರಳು ದಂಧೆ ಎಂಬ ಶಿರೋನಾಮೆಯಲ್ಲಿ ಪ್ರಕಟವಾದ ವರದಿಯಿಂದ ಎಚ್ಚೆತ್ತುಕೊಂಡ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಗೊಳಪಡುವ ಗುಹ್ಯ ಕೂಡುಗದ್ದೆ ಹಾಗೂ ಕೊಂಡಗೇರಿ ವ್ಯಾಪ್ತಿಯ ಅಕ್ರಮ ಮರಳು ಅಡ್ಡೆಗಳ ಮೇಲೆ ಧಾಳಿ ನಡೆಸಿ, ಮರಳು ಬಾಚುವ ಕೊಪ್ಪರಿಕೆ ಹಾಗೂ ಮರಳನ್ನು ವಶಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಂದಾಯ ಇಲಾಖೆ ಅಧಿಕಾರಿಗಳು ಖಚಿತ ಸುಳಿವಿನ ಮೇರೆಗೆ ಇಂದು ಗುಹ್ಯ ಗ್ರಾಮದ ಕೂಡುಗದ್ದೆಯ ನದಿ ದಡದ ಬಳಿ ಧಾಳಿ ನಡೆಸಿದ ಸಂದರ್ಭ ಮಾರಾಟಕಿಟ್ಟಿದ್ದ 2 ಲೋಡಿಗೂ ಅಧಿಕ ಅಕ್ರಮ ಮರಳು ಪತ್ತೆಯಾಗಿದ್ದು ನದಿ ದಡದ ನಿವಾಸಿ ರಮೇಶ್ ಎಂಬವರ ಮನೆಯಲ್ಲಿ ಕೂಡ ಶೇಖರಿಸಿಟ್ಟಿದ್ದ ಮರಳು ಪತ್ತೆಯಾಗಿದೆ. ಕೂಡುಗದ್ದೆ ಭಾಗದಲ್ಲಿ ಕಳೆದ ಸುಮಾರು ತಿಂಗಳುಗಳಿಂದ ತಾ.ಪಂ. ಮಾಜಿ ಸದಸ್ಯೆಯೋರ್ವರ ಪತಿಯು ಸೇರಿದಂತೆ ಹಲವು ಮಂದಿ ಮರಳು ಮಾಫಿಯಾಗಳು ಅಕ್ರಮವಾಗಿ ಮರಳು ದಂಧೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಹಲವು ದೂರುಗಳು ಕೇಳಿ
(ಮೂರನೇ ಪುಟದಿಂದ) ಬಂದಿದ್ದು ಈ ಬಗ್ಗೆ ಯಾವದೇ ಇಲಾಖೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತ, ಮರಳು ದಂಧೆ ನಿರಂತರವಾಗಿ ನಡೆಯುತ್ತಿದ್ದರೂ ಕೂಡ ಪೊಲೀಸ್ ಇಲಾಖೆ ಸ್ಥಳೀಯ ಠಾಣೆಯಲ್ಲಿ ವಿಶೇಷ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೋರ್ವರು ಈ ಬಗ್ಗೆ ಮೇಲಧಿಕಾರಿಗಳಿಗೆ ಹಾಗೂ ಯಾವದೇ ಇಲಾಖೆಗೆ ಮಾಹಿತಿ ನೀಡದೆÀ ಇದ್ದ ಬಗ್ಗೆ ಆರೋಪಗಳು ಕೇಳಿಬರುತ್ತಿದೆ. ಇತ್ತೀಚೆಗೆ ‘ಶಕ್ತಿ’ಯು ಅಕ್ರಮ ಮರಳುದಂಧೆ ಹಾಗೂ ಇಲಾಖೆಗಳ ನಿರ್ಲಕ್ಷ್ಯತನದ ಬಗ್ಗೆ ಸವಿಸ್ತಾರವಾದ ವರದಿ ಪ್ರಕಟಿಸಿದ್ದು, ಇದರಿಂದ ಎಚ್ಚೆತ್ತುಕೊಂಡ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮರಳು ತೆಗೆಯುವ ಹಾಗೂ ಮರಳು ರಾಶಿ ಹಾಕುವ ಜಾಗವನ್ನು ಪತ್ತೆಹಚ್ಚಿದೆ. ಕೂಡುಗದ್ದೆಯಲ್ಲಿ ವ್ಯವಸ್ಥಿತ ರೀತಿಯಲ್ಲಿ ಅಕ್ರಮ ಮರಳುದಂಧೆ ನಡೆಯುತ್ತಿದೆ ಎನ್ನಲಾಗಿದ್ದು, ನೈಸರ್ಗಿಕ ಸಂಪತಾದ ಸರಕಾರದ ಆಸ್ತಿಯನ್ನು ಕೊಳ್ಳೆಹೊಡೆಯುತ್ತಿದ್ದ ಮರಳು ದಂಧೆಕೋರರು ಇಂದು ಶ್ರೀಮಂತರಾಗಿದ್ದು, ಅವರ ಬಣ್ಣ ಇದೀಗ ಬಯಲಾಗಿದೆ. ಇದಲ್ಲದೆ ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸೇರಿದಂತೆ ಕೆಲವು ಸದಸ್ಯರುಗಳು ಹಾಗೂ ಕೆಲವು ರಾಜಕೀಯ ಮುಖಂಡರ ಕುಮ್ಮಕ್ಕಿನಿಂದ ಅಕ್ರಮ ಮರಳು ದಂಧೆ ನಿರಂತರವಾಗಿ ನಡೆಯುತ್ತಿದ್ದು, ಮರಳು ದಂಧೆಕೋರರ ನಡುವೆ ಪೈಪೋಟಿ ನಡೆಯುತ್ತಿದ್ದು, ಇತ್ತೀಚೆಗೆ ನಲ್ವತ್ತೆಕರೆಯಲ್ಲಿ ಮರಳು ತೆಗೆಯುವ ವಿಷಯದಲ್ಲಿ 2 ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಕೊನೆಗೆ ರಾಜಿ ಸಂದಾನ ನಡೆದ ವಿಚಾರವೂ ಗುಟ್ಟಾಗಿ ಉಳಿದಿಲ್ಲ. ಇಂದು ವಶಪಡಿಸಿಕೊಂಡ ಮರಳನ್ನು ಲೊಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಯಿತು. ಕಾರ್ಯಾ ಚರಣೆಯಲ್ಲಿ ಕಂದಾಯ ಪರೀಕ್ಷೆ ಶ್ರೀನಿವಾಸ, ಗ್ರಾಮಲೆಕ್ಕಿಗ ಮಂಜುನಾಥ್, ಠಾಣಾಧಿಕಾರಿ ಸಂತೋಷ್ ಕಶ್ಯಪ, ಲೋಕೋಪಯೋಗಿ ಇಲಾಖಾಧಿಕಾರಿ ವಿಜಯಕುಮಾರ್, ಸಹಾಯಕ ಠಾಣಾಧಿಕಾರಿ ವಸಂತ್ ಕುಮಾರ್, ಕುಶಾಲಪ್ಪ, ಮುಖ್ಯಪೇದೆ ಶ್ರೀನಿವಾಸ್, ಗ್ರಾಮ ಸಹಾಯಕರಾದ ಕೃಷ್ಣ, ಮಂಜು ಇನ್ನಿತರರು ಇದ್ದರು.
ಮತ್ತೊಂದೆಡೆ ಕೊಂಡಂಗೇರಿಯ ಅಕ್ರಮ ಮರಳು ಅಡ್ಡದ ಮೇಲೆ ಧಾಳಿ ನಡೆಸಿದ ಸಿದ್ದಾಪುರ ಪೊಲೀಸರು 50 ಚೀಲ ಮರಳು ಹಾಗೂ 2 ಕೊಪ್ಪರಿಕೆಗಳನ್ನು ವಶಪಡಿಸಿ ಕೊಂಡಿದ್ದಾರೆ.
ಒಟ್ಟಿನಲ್ಲಿ ಕಾವೇರಿ ನದಿಯಲ್ಲಿ ನಿರಂತರವಾಗಿ ಅಕ್ರಮ ಮರಳು ದಂಧೆಯನ್ನು ರಾಜಾರೋಷವಾಗಿ ನಡೆಸಿ ಕಾವೇರಿ ಒಡಲನ್ನು ಬರಿದಾಗಿಸುತ್ತಿದ್ದ ದಂಧೆಕೋರರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದು, ಇನ್ನಾದರೂ ಅಕ್ರಮ ಮರಳು ದಂಧೆಗೆ ಕಡಿವಾಣ ಬೀಳುವದೆ ಎಂಬದನ್ನು ಕಾದು ನೋಡಬೇಕಿದೆ.