ಮಡಿಕೇರಿ, ನ.6 : ಕೊಡಗು ಮತ್ತು ಕೊಡವರ ಸ್ವಾಭಿಮಾನಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಟಿಪ್ಪುವಿನ ದುಷ್ಕøತ್ಯಗಳನ್ನು ಸಮರ್ಥಿಸಿಕೊಳ್ಳುತ್ತಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಅವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕೆಂದು ಬಿಜೆಪಿಯ ಜಿಲ್ಲಾ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಒತ್ತಾಯಿಸಿದ್ದಾರೆ.

ಎ.ಕೆ. ಸುಬ್ಬಯ್ಯ ಅವರ ಪ್ರಚೋದನಾಕಾರಿ ಹೇಳಿಕೆಗಳಿಂದ ಕೊಡಗಿನಲ್ಲಿ ಶಾಂತಿ ಕದಡುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿರುವ ಅವರು ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಸ್ವಯಂ ದೂರು ದಾಖಲಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಟಿಪ್ಪುವಿನ ಪೂರ್ವಜರಂತೆ ವರ್ತಿಸುತ್ತಿರುವ ಎ.ಕೆ. ಸುಬ್ಬಯ್ಯ ಪಾಕಿಸ್ತಾನದಲ್ಲಿ ಹುಟ್ಟುವ ಬದಲು ಕೊಡಗಿನಲ್ಲಿ ಹುಟ್ಟಿದ್ದಾರೆ. ಕೊಡವರ ಮನೆಯಲ್ಲೇ ಹುಟ್ಟಿ ಕೊಡವರ ಕಗ್ಗೊಲೆಯನ್ನು ಸಮರ್ಥಿಸಿಕೊಳ್ಳುತ್ತಿರುವದು ಅತ್ಯಂತ ಖಂಡನೀಯವಾಗಿದೆ. ಜನಸಂಘದಲ್ಲಿ ಬೆಳೆದ ಇವರು ಇದೀಗ ಜಾತ್ಯತೀತತೆಯ ಮುಖವಾಡ ಧರಿಸಿಕೊಂಡು ರಾಷ್ಟ್ರಘಾತುಕ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದಿದ್ದಾರೆ.

ಹಾಲೇರಿ ವಂಶದ ಅರಸರಿಗೆ ನಿಷ್ಠರಾಗಿದ್ದ ಕೊಡಗಿನ ದಂಗೆಕೋರರು ದಂಗೆ ಎದ್ದ ಕಾರಣ ಟಿಪ್ಪು ಸಂಘರ್ಷ ನಡೆಸಿದ್ದಾನೆ ಎಂದು ಸುಬ್ಬಯ್ಯ ಹೇಳಿಕೆ ನೀಡಿದ್ದಾರೆ. ಕೊಡಗಿನ ಜನ ಅಂದು ದಂಗೆ ಏಳಲು ಟಿಪ್ಪು ನಡೆಸುತ್ತಿದ್ದ ದುಷ್ಕøತ್ಯಗಳೇ ಕಾರಣವಾಗಿದೆ. ದಂಗೆ ಎದ್ದವರು ಕೊಡಗಿನ ಜನರೇ ಆಗಿರುವದರಿಂದ ಟಿಪ್ಪುವಿನಿಂದ ಕೊಡಗಿಗೆ ಅನ್ಯಾಯವಾಗಿದೆ ಎನ್ನುವದು ಸಾಬೀತಾಗುತ್ತದೆ. ಸುಬ್ಬಯ್ಯ ಅವರು ಚರಿತ್ರೆಯನ್ನು ತಮ್ಮ ಮೂಗಿನ ನೇರಕ್ಕೆ ವಿಡಂಬನೆ ಮಾಡಿ ಜನರ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಸುಬ್ರಮಣ್ಯ ಉಪಾಧ್ಯಾಯ ಆರೋಪಿಸಿದ್ದಾರೆ.

ಕಳೆದ ವರ್ಷ ನಡೆದ ಟಿಪ್ಪು ಜಯಂತಿ ಸಂದರ್ಭ ವಿಹೆಚ್‍ಪಿ ಪ್ರಮುಖ ಕುಟ್ಟಪ್ಪ ಅವರ ಹತ್ಯೆಗೆ ಸಂಚು ರೂಪಿಸಿದ್ದು ಮಾತ್ರವಲ್ಲದೆ ಸಂಸದ ಪ್ರತಾಪ್ ಸಿಂಹ ಅವರು ಕೂಡ ಸಮಾಜ ಘಾತುಕ ಶಕ್ತಿಗಳ ಟಾರ್ಗೆಟ್ ಆಗಿರುವದು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಅವರ ಪ್ರಕರಣದ ಆರೋಪಿಗಳ ತನಿಖೆ ಸಂದರ್ಭ ಬಹಿರಂಗಗೊಂಡಿದೆ.