ಮಡಿಕೇರಿ, ಅ. 21: ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಅವರು ಸಮಾಜವನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದು, ಹಿಂದೂ ವಿರೋಧಿ ಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಜನಪರ ಹೋರಾಟ ಸಮಿತಿಯ ಸಂಚಾಲಕ ಬಲ್ಲಾರಂಡ ಮಣಿ ಉತ್ತಪ್ಪ, ಟಿಪÀÅ್ಪ ಜಯಂತಿ ಆಚರಣೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿಗಾಗಿ ಏನನ್ನೂ ನೀಡದ ಸುಬ್ಬಯ್ಯ ಅವರು ಆಶ್ರಮದಲ್ಲಿ ವಿಶ್ರಾಂತಿ ಪಡೆಯುವದು ಸೂಕ್ತವೆಂದು ಅಭಿಪ್ರಾಯಪಟ್ಟರು. ಎಲ್ಲಾ ವಿಚಾರಗಳಲ್ಲಿ ಮೂಗು ತೂರಿಸುತ್ತಿರುವ ಅವರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳಬೇಕೆಂದು ಒತ್ತಾಯಿಸಿದರು.
ಈ ಹಿಂದೆ ಬಿಜೆಪಿಯಿಂದಲೆ ವಿಧಾನ ಪರಿಷತ್ ಸದಸ್ಯರಾಗಿದ್ದ ಸುಬ್ಬಯ್ಯ ಇದೀಗ ಕೊಡವ ಸಮಾಜ ಬಿಜೆಪಿಯ ಬ್ರಾಂಚ್ ಆಫೀಸ್ ಎಂದು ಟೀಕಿಸುತ್ತಿರುವದು ಖಂಡನೀಯ. ಇವರು ಯಾವ ಪಕ್ಷದ ಏಜೆಂಟ್ ಎಂಬದನ್ನು ಮೊದಲು ತಿಳಿಸಲಿ ಎಂದು ಮಣಿ ಉತ್ತಪ್ಪ ಒತ್ತಾಯಿಸಿದರು. ರಾಜ್ಯ ಸರ್ಕಾರ ಅಭಿವೃದ್ಧಿ ಪರ ಚಿಂತನೆ ಮಾಡಬೇಕೆ ಹೊರತು ಕೊಡಗಿನ ಜನರ ಭಾವನೆಗೆ ಧಕ್ಕೆ ಉಂಟು ಮಾಡಿದ ಟಿಪ್ಪುವಿನ ಜಯಂತಿಯನ್ನು ಆಚರಿಸುವದು ಸರಿಯಲ್ಲವೆಂದರು. ಕಳೆದ ವರ್ಷ ಮೃತ ಪಟ್ಟ ವಿಹೆಚ್ಪಿ ಪ್ರಮುಖ ಕುಟ್ಟಪ್ಪ ಅವರ ಹುತಾತ್ಮ ದಿನವನ್ನು ನ. 10 ರಂದು ಚೆಟ್ಟಳ್ಳಿಯ ನರೇಂದ್ರ ಮೋದಿ ರೈತ ಸಹಕಾರ ಭವನದಲ್ಲಿ ಆಚರಿಸಲಾಗುವದೆಂದು ತಿಳಿಸಿದರು.
ವಿರೋಧದ ನಡುವೆಯೂ ಜಿಲ್ಲಾಡಳಿತ ಟಿಪ್ಪು ಜಯಂತಿಯನ್ನು ಆಚರಿಸಿದರೆ ಮುಂದೆ ನಡೆಯಬಹುದಾದ ಅಹಿತಕರ ಘಟನೆಗಳಿಗೆ ಜಿಲ್ಲಾಡಳಿತ ನೇರ ಹೊಣೆಯಾಗುತ್ತದೆ ಎಂದು ಮಣಿ ಉತ್ತಪ್ಪ ಎಚ್ಚರಿಕೆ ನೀಡಿದರು. ವಿವಾದದ ಆಚರಣೆÉಗಳ ಮೂಲಕ ಅಮಾಯಕರಿಗೆ ತೊಂದರೆ ಯಾಗುತ್ತಿದೆಯೆಂದು ಅಭಿಪ್ರಾಯಪಟ್ಟ ಅವರು, ಜಿ.ಪಂ. ಹಾಗೂ ಜಿಲ್ಲೆಯ ಮೂರು ತಾ.ಪಂ.ಗಳು ಟಿಪ್ಪು ಜಯಂತಿ ಆಚರಣೆಗೆ ವಿರುದ್ಧವಾದ ನಿರ್ಣಯವನ್ನು ತೆಗೆದುಕೊಂಡು ಸರ್ಕಾರಕ್ಕೆ ರವಾನಿಸಬೇಕೆಂದು ತಿಳಿಸಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಪೇರಿಯನ ಪೂಣಚ್ಚ, ಪ್ರಮುಖರಾದ ಧನಂಜಯ, ಚಂದ್ರ, ಶೇಖರ, ಚೆಟ್ಟಳ್ಳಿ ಗ್ರಾ.ಪಂ. ಸದಸ್ಯ ರವಿ ಉಪಸ್ಥಿತರಿದ್ದರು.