ಮಡಿಕೇರಿ, ಡಿ. 4: ಐಗೂರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಬಿಲ್ಲವ ಸಮಾಜದ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದು, ತನಿಖೆಯ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಕೊಡಗು ಜಿಲ್ಲಾ ಬಿಲ್ಲವ ಸಮಾಜ ಆರೋಪಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಜಿಲ್ಲಾಧ್ಯಕ್ಷ ಬಿ.ವೈ. ಆನಂದ ರಘು, ಐಗೂರಿನಲ್ಲಿ ನಡೆದ ಕುರ್‍ಆನ್ ಸುಟ್ಟ ಪ್ರಕರಣ ಹಾಗೂ ಕಾರಿಗೆ ಬೆಂಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿರುವಾಗಲೇ ಬಿಲ್ಲವ ಸಮಾಜವನ್ನು ಕೆಣಕುವ ಕೆಲಸವನ್ನು ಎ.ಕೆ. ಸುಬ್ಬಯ್ಯ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾರು ತಪ್ಪು ಮಾಡಿದ್ದಾರೋ ಆ ವ್ಯಕ್ತಿಗಳನ್ನು ಗುರುತಿಸಿ ಶಿಕ್ಷೆಗೆ ಗುರಿ ಮಾಡಬೇಕೇ ಹೊರತು ಇಡೀ ಸಮಾಜವನ್ನು ನಿಂಧಿಸುವದು ಸರಿಯಾದ ಕ್ರಮವಲ್ಲ. ಪ್ರಕರಣಗಳ ತನಿಖೆ ಹಂತದಲ್ಲಿಯೇ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಎ.ಕೆ. ಸುಬ್ಬಯ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯ ಪ್ರಮುಖ ಜನಾಂಗದವರಾಗಿರುವ ಸುಬ್ಬಯ್ಯ ಅವರು ತಮ್ಮ ಜನಾಂಗವನ್ನೇ ಧಿಕ್ಕರಿಸಿ ಮಾತನಾಡುವ ಚಾಳಿಯನ್ನು ಹೊಂದಿದ್ದು, ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸಮಾಜವನ್ನು ಒಡೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಟೀಕಿಸಿದ ಆನಂದ ರಘು ಇತರ ಸಮಾಜಗಳ ಬಗ್ಗೆ ಮಾತನಾಡುವ ಅಧಿಕಾರವನ್ನು ಎ.ಕೆ. ಸುಬ್ಬಯ್ಯರಿಗೆ ಯಾರೂ ನೀಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜದಲ್ಲಿ ಅಶಾಂತಿ ಮೂಡಿಸುವ ಮತ್ತು ಜನಾಂಗಕ್ಕೆ ಅಪಮಾನ ಮಾಡುವ ಹೇಳಿಕೆಗಳನ್ನು ನೀಡುವದನ್ನು ನಿಲ್ಲಿಸದಿದ್ದಲ್ಲಿ ಸುಬ್ಬಯ್ಯ ಅವರ ವಿರುದ್ಧ ಬಿಲ್ಲವ ಸಮಾಜದಿಂದ ಹೋರಾಟವನ್ನು ರೂಪಿಸುವದಾಗಿ ಆನಂದ ರಘು ಎಚ್ಚರಿಕೆ ನೀಡಿದರು. ನಾರಾಯಣ ಗುರುಗಳ ಆದರ್ಶವನ್ನು ಹೊಂದಿರುವ ಬಿಲ್ಲವ ಸಮಾಜ ಎಲ್ಲರೂ ಒಂದೇ, ದೇವರು ಒಬ್ಬನೇ ಎನ್ನುವ ತತ್ವದಡಿ ಜೀವನ ಸಾಗಿಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಖಜಾಂಚಿ ಬಿ.ಕೆ. ಮೋಹನ್ ಮಾತನಾಡಿ, ಸಮಾಜದಲ್ಲಿ ಒಡಕು ಮೂಡಿಸುವ ಮತ್ತು ಜಾತಿ ನಿಂದನೆಯ ಹೇಳಿಕೆಗಳನ್ನು ನೀಡುವದು ಖಂಡನೀಯವಾಗಿದ್ದು, ಇದನ್ನು ಸುಬ್ಬಯ್ಯ ಅವರು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸಮಾಜದ ಮಡಿಕೇರಿ ತಾಲೂಕು ಅಧ್ಯಕ್ಷ ರಾಜಶೇಖರ್, ಕಾನೂನು ಸಲಹೆಗಾರರಾದ ಬಿ.ಸಿ. ರಮೇಶ್, ಪ್ರಮುಖರಾದ ಬಿ.ಆರ್. ಚಂದ್ರಹಾಸ್ ಹಾಗೂ ಅರುಣ್ ಕುಮಾರ್ ಉಪಸ್ಥಿತರಿದ್ದರು.