ಕೂಡಿಗೆ, ಸೆ. 20: ಕೊಡಗು ಜಿಲ್ಲೆಯಲ್ಲಿ ಅನೇಕ ಶ್ರೀಮಂತರಿದ್ದು, ಶ್ರೀಮಂತರು ಹೃದಯವಂತಿಕೆಯ ಮೂಲಕ ತನ್ನ ಆದಾಯದಲ್ಲಿ ಶಿಕ್ಷಣ ಹಾಗೂ ಸಮಾಜದ ಪ್ರಗತಿಗೆ ಪ್ರೋತ್ಸಾಹಿಸಿದಾಗ ಕ್ಷೇತ್ರ ಪ್ರಗತಿ ಕಾಣಲು ಸಾಧ್ಯವಾಗುತ್ತದೆ ಎಂದು ಶಾಸಕ ಅಪ್ಪಚ್ಚುರಂಜನ್ ಹೇಳಿದರು.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ದತ್ತು ಯೋಜನೆಯಡಿ ಎಸ್‍ಎಲ್‍ಎನ್ ಕಾಫಿ ಸಂಸ್ಥೆ ಮಾಲೀಕರಾದ ಸಾತಪ್ಪನ್ ಮತ್ತು ವಿಶ್ವನಾಥನ್ ಅವರು ಶಾಲೆಯನ್ನು ದತ್ತು ತೆಗೆದುಕೊಂಡು 9 ಶಾಲೆಗೆ ಮೂಲಭೂತ ಸೌಕರ್ಯದ 15 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳಿಸಿದ ಕಾಮಗಾರಿ ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಾರ್ವಜನಿಕರ ಮತ್ತು ದಾನಿಗಳ ಸಹಕಾರದಿಂದ ಹೆಚ್ಚು ಶಿಕ್ಷಣ ಸಂಸ್ಥೆಗಳು ನಡೆಯುತ್ತಿದ್ದು, ಶಿಕ್ಷಣಕ್ಕೆ ಒತ್ತುಕೊಡುವ ನಿಟ್ಟಿನಲ್ಲಿ ಸಹಕಾರಿಗಳಾಗಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಇಬ್ರಾಹಿಂ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯೆ ಕೆ.ಆರ್.ಮಂಜುಳಾ, ತಾ.ಪಂ. ಸದಸ್ಯ ಗಣೇಶ್, ಎಸ್‍ಎಲ್‍ಎನ್ ಕಾಫಿ ಸಂಸ್ಥೆ ಮಾಲೀಕರಾದ ಸಾತಪ್ಪನ್ ಮತ್ತು ವಿಶ್ವನಾಥನ್ ಮತ್ತು ಕುಟುಂಬಸ್ಥರು, ಕೂಡಿಗೆ ಡಯಟ್ ಪ್ರಾಂಶುಪಾಲ ದೊಡ್ಡಮಲ್ಲಪ್ಪ, ಕೂಡುಮಂಗಳೂರು ಗ್ರಾ.ಪಂ. ಸದಸ್ಯರಾದ ಬಾಸ್ಕರ್ ನಾಯಕ್, ಪಾರ್ವತಮ್ಮ, ಮಂಜು, ಪ್ರಮಿಳಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಸನ್ನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಕೂಡುಮಂಗಳೂರು ಸಹಕಾರ ಬ್ಯಾಂಕಿನ ನಿರ್ದೇಶಕ ಕೆ.ಕೆ.ಬೋಗಪ್ಪ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಜರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ದತ್ತು ಯೋಜನೆಯ ಒಪ್ಪಂದ ಪತ್ರಗಳನ್ನು ಕಾಫಿ ಸಂಸ್ಥೆಯ ಮಾಲೀಕರಿಗೆ ಹಸ್ತಾಂತರಿಸಿದರು.