ಮಾದಾಪುರ, ಜು. 5: ಭಾರೀ ಗಾತ್ರದ ಬಂಡೆಕಲ್ಲೊಂದು ಉರುಳಿಬಿದ್ದು ನೂತನವಾಗಿ ನಿರ್ಮಾಣಗೊಳ್ಳುತ್ತಿದ್ದ ಮನೆ ತೀವ್ರ ಜಖಂಗೊಂಡಿರುವ ಘಟನೆಯೊಂದು ಇಂದು ಬೆಳಿಗ್ಗೆ ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಕುಂಬೂರುವಿನಲ್ಲಿ ನಡೆದಿದೆ.

ಅಲ್ಲಿನ ನಿವಾಸಿ ಜನಾರ್ಧನ ಸಾಯಿ ಎಂಬವರು ನೂತನವಾಗಿ ಮನೆ ಕಟ್ಟಿದ್ದು, ಗೃಹಪ್ರವೇಶವಷ್ಟೆ ಬಾಕಿ ಉಳಿದಿತ್ತು. ಸಣ್ಣಪುಟ್ಟ ಕೆಲಸ ಮಾತ್ರ ಬಾಕಿ ಇದ್ದು, ಇವರು ಪತ್ನಿ ಸಂಧ್ಯಾ ಹಾಗೂ ಇಬ್ಬರು ಪುಟ್ಟ ಮಕ್ಕಳೊಂದಿಗೆ ಕೆಲವು ದಿನಗಳಿಂದ ನೂತನ ಮನೆಯಲ್ಲೇ ಉಳಿಯುತ್ತಿದ್ದರು. ನಿನ್ನೆ ಪತ್ನಿಯ ತವರು ಮನೆಗೆಂದು ಇವರು ಕುಟುಂಬ ಸಹಿತ ತೆರಳಿದ್ದರು. ಇಂದು ಬೆಳಗ್ಗಿನ ಜಾವ ಮನೆಯ ಹಿಂಬದಿಯಲ್ಲಿ ಮೇಲ್ಭಾಗದಲ್ಲಿದ್ದ ಭಾರೀ ಗಾತ್ರದ ಬಂಡೆಕಲ್ಲು ಉರುಳಿಬಿದ್ದಿದೆ. ಈ ರಭಸಕ್ಕೆ ನೂತನ ಮನೆಯ ಹಿಂಭಾಗದ ಗೋಡೆÉ ಮಾತ್ರವಲ್ಲದೆ ಒಳಗಿನ ಇತರ ಎರಡು ಕೊಠಡಿಗಳ ಗೋಡೆಯೂ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

ಮನೆಯ ಮೇಲ್ಛಾವಣಿ ಇದೇ ಕಲ್ಲಿನ ಮೇಲೆ ನಿಂತಿದ್ದರಿಂದ ಹೆಂಚುಗಳು ಪುಡಿಯಾಗದೆ ಉಳಿದುಕೊಂಡಿದೆ. ಅದೃಷ್ಟವಶಾತ್ ಮನೆಮಂದಿ ನಿನ್ನೆ ಮನೆಯಲ್ಲಿ ಉಳಿಯದ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ದೂರು ನೀಡಲಾಗಿದೆ. ಹೊಸ ಮನೆ ಪ್ರವೇಶದ ಕನಸಿನಲ್ಲಿದ್ದವರಿಗೆ ಗೃಹ ಪ್ರವೇಶಕ್ಕೆ ಮುನ್ನವೇ ಮನೆ ಬಹುತೇಕ ಜಖಂಗೊಂಡಿರುವದು ಆಘಾತ ಮೂಡಿಸಿದೆ.

ನಿನ್ನೆ ಸುರಿದ ಭಾರಿ ಮಳೆಗೆ ಇಲ್ಲಿಗೆ ಸಮೀಪದ ಕುಂಬೂರು ಬಳಿ ನೂತನವಾಗಿ ನಿರ್ಮಿಸಿದ್ದ ಮನೆಯೊಂದರ ಮೇಲೆ ಭಾರಿ ಗಾತ್ರದ ಬಂಡೆಯೊಂದು ಉರುಳಿ ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ನಿನ್ನೆ ರಾತ್ರಿ ಕುಂಬೂರು ಪೈಸಾರಿಯ ಜನಾರ್ಧನ ಸಾಯಿ ಹಾಗು ಸಂಧ್ಯಾ ದಂಪತಿಗಳಿಗೆ ಸೇರಿದ ಮನೆಯ ಮೇಲೆ ಸಮೀಪದ ಬರೆಯೊಂದರ ಮೇಲಿದ್ದ ಭಾರಿ ಗಾತ್ರದ ಬಂಡೆಯೊಂದು ದಿಢೀರ್ ಉರುಳಿದ ಪರಿಣಾಮ ಅಂದಾಜು ರೂ.2ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ. ಸ್ಥಳಕ್ಕೆ ಸುಂಟಿಕೊಪ್ಪ ನಾಡಕಚೇರಿಯ ಗ್ರಾಮ ಲೆಕ್ಕಿಗ ಪರಮೇಶ್, ಮಾದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಉತ್ತಯ್ಯ, ಕಾರ್ಯದರ್ಶಿ ಕೀರ್ತಿ, ಮಾದಾಪುರ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎಂ. ಸೋಮಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಗೃಹ ಪ್ರವೇಶವನ್ನು ಒಂದು ತಿಂಗಳಿಗೆ ಮುಂದೂಡ ಲಾಗಿತ್ತು. ಅದೃಷ್ಟವಶಾತ್ ಮನೆಯಲ್ಲಿ ಯಾರೂ ವಾಸ ಇಲ್ಲದೇ ಇರುವದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ ಎಂದು ಮನೆಯ ಮಾಲೀಕ ಜನಾರ್ಧನ ಸಾಯಿ ತಿಳಿಸಿದ್ದಾರೆ. -ವಿಶ್ವ ಕುಂಬೂರು,

ವಿಜಯ್ ಹಾನಗಲ್