ಶ್ರೀಮಂಗಲ, ಜ. 29: ಶ್ರೀಮಂಗಲ ಸನಿಹದ ಕುಮಟೂರು ಗ್ರಾಮದಲ್ಲಿ ಹೆಣ್ಣು ಹುಲಿಯೊಂದು ಉರುಳಿಗೆ ಬಲಿಯಾಗಿದೆ. ಕೊಡಗಿನಲ್ಲಿ ಇತ್ತೀಚೆಗೆ ಆಕಸ್ಮಿಕ ಸಾವಿಗೀಡಾದ ಪ್ರಕರಣದಲ್ಲಿ ಇದು ಮೂರನೇ ಹುಲಿಯಾಗಿದೆ. ಸುಮಾರು 5 ವರ್ಷದ ಹೆಣ್ಣು ಹುಲಿ ಉರುಳಿನಲ್ಲಿ ಸಿಲುಕಿ ಕಳೆದ ಎರಡು ದಿನಗಳ ಹಿಂದೆಯೇ ಸಾವಿಗೀಡಾಗಿರಬಹುದಾಗಿ ಶಂಕಿಸಲಾಗಿದೆ. ಆದರೆ ಇಂದು ಅಪರಾಹ್ನ ಅರಣ್ಯ ಇಲಾಖೆಯ ಕಣ್ಣಿಗೆ ಈ ಮೃತ ಹುಲಿ ಗೋಚರಿಸಿದೆ. ಕುಮಟೂರು ಗ್ರಾಮದ ತೋಟವೊಂದರ ಸನಿಹ ಕಾಡು ಹಂದಿಗಾಗಿ ಇರಿಸಲಾಗಿದ್ದ ಉರುಳಿಗೆ ಸಿಲುಕಿ ಹುಲಿ ಮೃತವಾಗಿರುವದಾಗಿ ವೀರಾಜಪೇಟೆ ತಾಲೂಕು ಅರಣ್ಯ ಉಪ ಸಂರಕ್ಷಣಾಧಿಕಾರಿ ಸೂರ್ಯಸೇನ ‘ಶಕ್ತಿ'ಗೆ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವದು ಎಂದು ತಿಳಿಸಿದ್ದಾರೆ.

ಇಂದು ಹುಣಸೂರು ವಿಭಾಗದ ವನ್ಯಜೀವಿ ತಜ್ಞ ಡಾ. ಉಮಾಶಂಕರ್ ಅವರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ದೇಹವನ್ನು ಸುಡಲಾಯಿತು. ಈ ಸಂದರ್ಭ ಜಿಲ್ಲಾ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್, ರಾಷ್ಟ್ರೀಯ ಹುಲಿ ಸಂರಕ್ಷಣಾ ವಿಭಾಗದ ಪ್ರತಿನಿಧಿ ರಾಜ್‍ಕುಮಾರ್, ಜಿಲ್ಲಾ ವನ್ಯಜೀವಿ ಉಪ ಸಂರಕ್ಷಣಾಧಿಕಾರಿ ಜಯಾ ಮತ್ತಿತರರು ಇದ್ದರು.

ಹುಲಿಯ ಕುತ್ತಿಗೆ ಮತ್ತು ಹೊಟ್ಟೆಯ ಭಾಗದಲ್ಲಿ ಉರುಳಿನ ಗಾಯ ಕಂಡು ಬಂದಿದೆ. ಕಳೆದ 3-4 ದಿನಗಳಿಂದಲೇ ಈ ಭಾಗದಲ್ಲಿ ಹುಲಿಯ ಧಾಳಿಯಿದ್ದು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವದೆ ಕಾರ್ಯಾಚರಣೆ ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದ್ದು, ಕಳೆದ ಬುಧವಾರ ಕುಮುಟೂರುವಿನ ಮತ್ರಂಡ ಶರತ್ ಎಂಬವರ ಕೊಟ್ಟಿಗೆಗೆ ಹುಲಿ ಧಾಳಿ ಮಾಡಿದ್ದು, ಹಸುವಿನ ಕುತ್ತಿಗೆಯ ಭಾಗಕ್ಕೆ ಗಾಯವಾಗಿತ್ತು. ಆದರೆ ಹಸುವನ್ನು ಕೊಲ್ಲದೆ ಜೊತೆಯಲ್ಲೆ ಇದ್ದ ಕರುವನ್ನು ಬಿಟ್ಟು ತೆರಳಿತ್ತು. ಮಾರನೇ ದಿನ ಕೊಟ್ಟಿಗೆಗೆ ತೆರಳುವಾಗ ಶರತ್ ಇದನ್ನು ಗಮನಿಸಿದ್ದಲ್ಲದೆ ಹಸುವಿನ ಕೋಡುವಿನಲ್ಲಿ ರಕ್ತವನ್ನು ಕಂಡು ಹಸು ಮತ್ತು ಹುಲಿಗೆ ಘರ್ಷಣೆಯಾಗಿದೆ ಎಂದು ಪತ್ತೆಯಾಯಿತು. ಹುಲಿ ಈ ಮೊದಲೇ ಗಾಯಗೊಂಡಿದ್ದರಿಂದ ಹಸುವನ್ನು ಬೇಟೆಯಾಡದೆ ಹೋಗಿರಬಹುದೆಂದು ಅಂದಾಜಿಸಲಾಗಿತ್ತು, ಈ ಬಗ್ಗೆ ಅರಣ್ಯ ಇಲಾಖೆ ಕೂಡಲೇ ಕಾರ್ಯ ಪ್ರವೃತ್ತರಾಗಬೇಕಾಗಿದ್ದವರು 2 ದಿನ ಬಿಟ್ಟು ಸ್ಥಳಕ್ಕೆ ತೆರಳಿದ್ದಾರೆ. ಹುಲಿಯ ಧಾಳಿಯಿಂದ ಗಾಯಗೊಂಡ ಹಸುವನ್ನು ಶರತ್ ಶ್ರೀಮಂಗಲ ಪಶು ವೈದ್ಯಾಧಿಕಾರಿ ಬಳಿ ಕರೆತಂದು ಹಸುವನ್ನು ಉಳಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಬೆಳಗ್ಗಿನ ಹೊತ್ತಿನಲ್ಲೆ ಹುಲಿಯನ್ನು ಸಾರ್ವಜನಿಕರು ಕಂಡು ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದರೂ ಸ್ಪಂದಿಸಿರಲಿಲ್ಲ ಎಂದು ಗ್ರಾಮಸ್ಥರು ದೂಷಿಸಿದ್ದಾರೆ.