ಮಡಿಕೇರಿ, ಸೆ.20 : ದಕ್ಷಿಣ ಭಾರತದ ಪ್ರತಿಷ್ಠಿತ ಬೆಳೆಗಾರರ ಸಂಸ್ಥೆ ಉಪಾಸಿಯ ಅಧ್ಯಕ್ಷರಾಗಿ ಕೊಡಗಿನ ಸುಂಟಿಕೊಪ್ಪದ ಬೆಟ್ಟಗೇರಿ ಸಮೂಹ ಕಾಫಿ ತೋಟಗಳ ಮಾಲೀಕ ಡಿ.ವಿನೋದ್ ಶಿವಪ್ಪ ನೇಮಕಗೊಂಡಿದ್ದಾರೆ.
ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಸದರನ್ ಇಂಡಿಯಾ ಉಪಾಸಿ ಸಂಸ್ಥೆಯು 1893 ರಿಂದ ಅಸ್ತಿತ್ವದಲ್ಲಿದ್ದು, ತಮಿಳುನಾಡಿನ ಕೂನೂರ್ನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ. ಹಾಲಿ ಉಪಾಧ್ಯಕ್ಷರಾಗಿರುವ ವಿನೋದ್ ಶಿವಪ್ಪ ಅವರು ತಾ.24 ರಂದು ಊಟಿ ಸಮೀಪದ ಫರ್ನ್ಹಿಲ್ ನ ಸ್ಟರ್ಲಿಂಗ್ ಹಾಲಿಡೇಸ್ನಲ್ಲಿ ನಡೆಯುವ 123 ನೇ ವಾರ್ಷಿಕ ಮಹಾಸಭೆಯಲ್ಲಿ ಉಪಾಸಿಯ 116 ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಡಿ.ವಿನೋದ್ ಶಿವಪ್ಪ ಅವರು ಕೊಡಗಿನಿಂದ ಉಪಾಸಿ ಸಂಸ್ಥೆಯ 10 ನೇ ಅಧ್ಯಕ್ಷರಾಗಿ ನೇಮಕಗೊಳ್ಳುತ್ತಿದ್ದು, 1970-71 ರಲ್ಲಿ ವಿನೋದ್ ಅವರ ತಂದೆ, ಡಿ.ಶಿವಪ್ಪ ಉಪಾಸಿಯ ಅಧ್ಯಕ್ಷರಾಗಿದ್ದರು.
ವಿನೋದ್ ಶಿವಪ್ಪ ಅವರು ನಿರ್ಗಮಿತ ಅಧ್ಯಕ್ಷ ಎನ್. ಧರ್ಮರಾಜ್ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾರತ ಸರಕಾರದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಶಂಕರ್ ಅಗರವಾಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಉಪಾಸಿ ಸಂಸ್ಥೆಯು ಕಾಫಿ, ಟೀ, ಕಾಳು ಮೆಣಸು, ರಬ್ಬರ್ ಮತ್ತು ಇತರ ಎಲ್ಲಾ ಸಂಬಾರ ಬೆಳೆಗಳ ಹಿತರಕ್ಷಣೆಯನ್ನು ಕಾಯುವಲ್ಲಿ ಕರ್ತವ್ಯ ನಿರತವಾಗಿದೆ. ಸಂಸ್ಥೆಯು ಅಧ್ಯಕ್ಷ, ಉಪಾಧ್ಯಕ್ಷರನ್ನು ಹೊರತು ಪಡಿಸಿದಂತೆ 28 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಹೊಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಿನೋದ್ ಶಿವಪ್ಪ ಅವರು ಕಳೆದ ಅನೇಕ ದಶಕಗಳಿಂದ ತಮ್ಮ ಕುಟುಂಬವು ಕಾಫಿ ವ್ಯವಸಾಯದಲ್ಲಿ ತೊಡಗಿದ್ದು, ಕಾಫಿ ಸೇರಿದಂತೆ ಎಲ್ಲಾ ಬೆಳೆಗಾರರ, ಕಾರ್ಮಿಕ ವರ್ಗದ ಜೊತೆಗೆ ಪ್ಲಾಂಟೇಷನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪ್ರತ್ಯಕ್ಷ ಮತ್ತು ಪರೋಕ್ಷ ಕೆಲಸಗಾರರ ಹಿತರಕ್ಷಣೆ ಮಾಡುವದು ತನ್ನ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಡಿ.ವಿನೋದ್ ಶಿವಪ್ಪ ಅವರು ಕೊಡುಗೈ ಕಳೆದ ಎರಡು ದಶಕಗಳಿಂದ ತಮ್ಮ ತಂದೆಯವರ ಹೆಸರಿನಲ್ಲಿ ಸುಂಟಿಕೊಪ್ಪದಲ್ಲಿ ರಾಜ್ಯಮಟ್ಟದ ಗೋಲ್ಡ್ಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ಪ್ರಾಯೋಜಿಸುತ್ತಾ ಬಂದಿದ್ದಾರೆ.