ಮಡಿಕೇರಿ, ಡಿ. 20: ಉಪಾಸಿ ಅಧ್ಯಕ್ಷ ಡಿ. ವಿನೋದ್ ಶಿವಪ್ಪ ಮತ್ತು ಉಪಾಸಿಯ ಸೆಕ್ರೆಟ್ರಿ ಜನರಲ್ ಉಲ್ಲಾಸ್ ಮೆನನ್ನ್ ಅವರು ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ರಾಜ್ಯ ಸಚಿವೆ ನಿರ್ಮಾಲ ಸೀತಾರಾಮನ್ ಅವರನ್ನು ಭೇಟಿ ಮಾಡಿ ತೋಟಗಾರಿಕಾ ಬೆಳೆಗಳ ಬಗ್ಗೆ ಚರ್ಚೆ ನಡೆಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಉಪಾಸಿ ಸಂಸ್ಥೆ ವಾಣಿಜ್ಯ ಸಚಿವರನ್ನು ತಾ. 19 ರಂದು ನವದೆಹಲಿಯ ಅವರ ಕಚೇರಿಯಲ್ಲಿ ಭೇಟಿ ಮಾಡಿ ಕಾಫಿ ಮತ್ತು ಇತರ ತೋಟಗಾರಿಕಾ ಬೆಳೆಗಳ ಬಗ್ಗೆ ಚರ್ಚೆ ನಡೆಸಿದ್ದು, ಕಾಫಿಗೆ ಸಂಬಂಧಪಟ್ಟಂತೆ ಕಾಫಿ ಕಾಯ್ದೆ 2016 ಜೊತೆಗೆ ಕಾಫಿ ಕುರಿತಾದ ಸಂಶೋಧನಾ ವಿಷಯಗಳತ್ತ ಒತ್ತು ಕೊಡುವದು ಸೇರಿದಂತೆ ಆದಾಯ ತೆರಿಗೆಯ ನಿಯಮ 7ಬಿ ಯನ್ನು ಮಾರ್ಪಡು ಮಾಡುವದು ಅಲ್ಲದೆ ವಿವಿಧ ವಿಷಯಗಳನ್ನು ಚರ್ಚಿಸಲಾಗಿದೆ. ಟೀ ಬೆಳೆಗೆ ಸಂಬಂಧಿಸಿದಂತೆ ಅದರ ರಫ್ತು ಮತ್ತು ಹರಾಜು ಪ್ರಕ್ರಿಯೆ ಹಾಗೂ ಇತರ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.
ರಬ್ಬರ್ ಬೆಳೆಯ ಆಮದು ಮತ್ತು ರಫ್ತು ಕುರಿತಂತೆ ಚರ್ಚೆ ನಡೆಸಲಾಗಿದ್ದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ಮಾಣ ಮತ್ತು ದುರಸ್ತಿ ಸಂದರ್ಭ ರಬ್ಬರ್ ಬಳಸುವ ನಿಟ್ಟಿನಲ್ಲಿ ತಾಂತ್ರಿಕತೆಯನ್ನು ಉಪಯೋಗಿಸುವ ಬಗ್ಗೆ ಕೂಡ ಸಚಿವರ ಗಮನಕ್ಕೆ ತರಲಾಗಿದೆ. ಕೇರಳದ ವೈನಾಡು ಮತ್ತು ಈರುಟ್ಟಿ ಜಿಲ್ಲೆಗಳಲ್ಲಿ ಮತ್ತು ಕರ್ನಾಟಕದ ಹಲವು ಪ್ರದೇಶಗಳಲ್ಲಿ ಬೆಳೆಯಲಾಗುವ ಕರಿಮೆಣಸಿಗೆ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಸಚಿವರ ಗಮನ ಸೆಳೆಯಲಾಗಿದೆ.
ನೂತನ ಜಿಎಸ್ಟಿ ಕಾಯ್ದೆಯಲ್ಲಿ ಕಾಫಿ ಮತ್ತು ಟೀ ಉತ್ಪನ್ನಗಳಿಗೆ ಕನಿಷ್ಟ ತೆರಿಗೆ ದರ ವಿಧಿಸುವ ಬಗ್ಗೆ ಬೋನಸ್ ಕಾಯ್ದೆ ಮತ್ತು ಭವಿಷ್ಯ ನಿಧಿ ಕಾಯ್ದೆಯ ಬಗ್ಗೆ ಮಾರ್ಪಾಡುಗಳು ಬದಲಾದ ಪರಿಸ್ಥಿತಿಯಲ್ಲಿ ಮಾಡಬೇಕಾಗಿದ್ದು, ಅರಣ್ಯ ನೀತಿಯನ್ನು ಪ್ಲಾಂಟೇಶನ್ ವ್ಯಾಪ್ತಿಯಲ್ಲಿ ವಾಣಿಜ್ಯ ಇಲಾಖೆ ಪ್ಲಾಂಟೇಶನ್ ಬೇರೆ ರೀತಿಯಲ್ಲಿ ಅಂದರೆ ಪ್ಲಾಂಟೇಶನ್ ವರ್ಗಕ್ಕೆ ಅನುಕೂಲವಾಗುವ ರೀತಿಯಲ್ಲಿ ಜಾರಿಗೆ ತರುವಂತೆ ಸಂಬಂಧಿಸಿದವ ರೊಂದಿಗೆ ಚರ್ಚಿಸಬೇಕೆಂದು ಸಚಿವರನ್ನು ಕೋರಲಾಗಿದ್ದು, ಉಪಾಸಿಯ ಬೇಡಿಕೆಗಳಿಗೆ ಮತ್ತು ಮುಂದಿಟ್ಟ ಅಹವಾಲುಗಳಿಗೆ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಉಪಾಸಿ ಅಧ್ಯಕ್ಷ ಡಿ.ವಿನೋದ್ ಶಿವಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.