ಸುಂಟಿಕೊಪ್ಪ, ಜೂ. 11: ಸುಂದರ ಹಸಿರು ಕಾನನಗಳ ನಡುವೆ ರಮಣೀಯ ಪಕೃತಿ ಸೌಂದರ್ಯ ತಾಣದಲ್ಲಿ ಸುಸಜ್ಜಿತ ಕಟ್ಟಡ ತಲೆ ನಿಂತಿರುವ ಮೊರಾರ್ಜಿ ದೇಸಾಯಿ ವಸತಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳ ಭವಿಷ್ಯ ಆಯೋಮಯವಾಗಿದೆ.

ಗರಗಂದೂರಿನಲ್ಲಿ 2015-16ನೇ ಸಾಲಿನಿಂದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಇಲಾಖೆಯ ಆಶ್ರಯದಲ್ಲಿ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜು ನಡೆಯುತ್ತಿದೆ.

2016ನೇ ಸಾಲಿನಲ್ಲಿ ಕಾಲೇಜಿನ ಫಲಿತಾಂಶ ಶೇ. 93.3 ರಷ್ಟಿದೆ. 2 ಡಿಸ್ಟಿಕ್ಷನ್, ಓರ್ವ ದ್ವಿತೀಯ ಶ್ರೇಣಿ ಹಾಗೂ ಉಳಿದ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಉಪನ್ಯಾಸಕರ ಪರಿಶ್ರಮದಿಂದ ಉತ್ತಮ ಫಲಿತಾಂಶ ಬರಲು ಸಾಧ್ಯವಾಗಿದೆ.

ಆದರೆ ಸರಕಾರದ ದ್ವಂದ್ವ ನೀತಿಯಿಂದ ಕಳೆದ 6 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನ ನೀಡುತ್ತಿದ್ದ ಗುತ್ತಿಗೆ ಆಧಾರದ ಉಪನ್ಯಾಸಕರನ್ನು ಏಕಾಏಕಿ ತೆಗೆದು ಹಾಕಿರುವದರಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಸರಕಾರ ಕೂಡಲೇ ಉಪನ್ಯಾಸಕರನ್ನು ನೇಮಕ ಮಾಡಬೇಕೆಂದು ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೊಡ್ಲಿಪೇಟೆಯ ಹರೀಶ್ ಆಗ್ರಹಿಸಿದ್ದಾರೆ. ಕಾಲೇಜಿನ ಪ್ರಾಂಶುಪಾಲೆ ಕೆ.ಡಿ. ನೀತಾ ಅವರು ಕಾಲೇಜಿನಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಎಲ್ಲಾ ಮೂಲಭೂತ ಸೌಲಭ್ಯವಿದೆ. ಗುತ್ತಿಗೆ ಆಧಾರಿತ ಉಪನ್ಯಾಸಕರನ್ನು ನೇಮಕ ಮಾಡಲು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಇಲಾಖೆ ಹಿರಿಯ ಅಧಿಕಾರಿಗಳು ಪ್ರಕ್ರಿಯೆ ಆರಂಭಿಸಿದ್ದಾರೆ. ಸದ್ಯದಲ್ಲೇ ಉಪನ್ಯಾಸಕರ ನೇಮಕ ಆಗಲಿದೆ ಎಂದು ಮಾಹಿತಿ ನೀಡಿದರು.